ನಾಡೋಜ, ಪದ್ಮಶ್ರೀ
ಪ್ರೊ. ಗಂಜಾಂ ವೆಂಕಟಸುಬ್ಬಯ್ಯ – ಪದಬ್ರಹ್ಮರಿಗೆ ಪದನಮನ
ಲೇಖನ: ಡಾ. ಆಜಾದ್ ಐ.ಎಸ್.
(ಆಧಾರ- ಡಾ ಎಸ್. ಶ್ರೀಕಂಠ ಶಾಸ್ತ್ರಿಯವರ ಜಾಲತಾಣ)
ಮಂಡ್ಯ-ಮೇಲುಕೋಟೆ
ನಡುವೆ ಬರುವ ಪುಟ್ಟಗ್ರಾಮ ಮುದಗೊಂದೂರಿನ ಪೂರ್ವಜ ಹಿನ್ನೆಲೆಯ “ಜೀವಿ” ಎಂದೇ ಪ್ರಖ್ಯಾತರಾದ ನಾಡೋಜ,
ಪದ್ಮಶ್ರೀ ಪ್ರೊ. ವೆಂಕಟಸುಬ್ಬಯ್ಯನವರು ಜನಿಸಿದ್ದು 1912 ಆಗಸ್ಟ್ 23 ರಂದು ಕಾವೇರಿ ತಟದ ಕಾಯ್ಗೊನಹಳ್ಳಿ ಎಂಬ ಊರಿನಲ್ಲಿ. ತಂದೆ ತಿಮ್ಮಣ್ಣಯ್ಯ
ಮತ್ತು ತಾಯಿ ಸುಬ್ಬಮ್ಮರ ಎಂಟು ಮಂದಿ ಮಕ್ಕಳಲ್ಲಿ ಜೀವಿಯವರು ಎರಡನೇಯವರು. ತಂದೆಯವರೊಂದಿಗೆ ಕಾವೇರಿಯಿಂದ
ನೀರುತರಲು ಹೋಗುತ್ತಿದ್ದಾಗ “ಅಮರಕೋಶ” ಪಠಣ ಮಾಡುತ್ತಿದ್ದರಂತೆ ಜೀವಿ. ಕನ್ನಡ ಅಧ್ಯಾಪಕರಾಗಿದ್ದ ತಿಮ್ಮಣ್ಣಯ್ಯನವರ
ಜೊತೆ ಸ್ವಾಭಾವಿಕವಾಗಿ ಅವರು ವರ್ಗವಾಗಿ ಹೋದಲ್ಲೆಲ್ಲಾ ಜೀವಿಯವರೂ ಹೋಗುತ್ತಿದರಿಂದ ಬನ್ನೂರು ಮತ್ತು
ಮಧುಗಿರಿ ಇವರಿಗೆ ಪರಿಚಿತ ಸ್ಥಳಗಳಾಗಿದ್ದವು. ಬಾಲ್ಯದಿಂದಲೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ
ಮುಂಚೂಣಿಯಲ್ಲಿರುತ್ತಿದ್ದ ಜೀವಿಯವರು ಪರ್ವತಾರೋಹಣ, ಕ್ರೀಡೆಗಳಲ್ಲಿ ಮುಂದಿದ್ದರಂತೆ. ಮುಂದೊಮ್ಮೆ
ಇವರ ಈ ಬಹುರಂಗ ಪ್ರತಿಭೆಯನ್ನು ಗುರಿತಿಸಿದ ಸರ್ವಪಲ್ಲಿ ಡಾ ರಾಧಾಕೃಷ್ಣನ್ ರವರು ಬೆನ್ನು ತಟ್ಟಿದ್ದರಂತೆ.
1927 ರಲ್ಲಿ ಮಧುಗಿರಿಯಲ್ಲಿ ಭಾಷಣ ಮಾಡಿದ ಮಹಾತ್ಮ ಗಾಂಧಿಯವರಿಂದ ಬಹಳವಾಗಿ ಪ್ರಭಾವಿತರಾಗಿದ್ದರಂತೆ
ಜೀವಿ. ಮಧುಗಿರಿಯಲ್ಲೇ ಅವರು ಮೊದಲಿಗೆ ಭೇಟಿಯಾಗಿದ್ದು -ಕಥಾ ಸಾಹಿತಿ ಪ್ರೊ.ಮಾಸ್ತಿಯವರನ್ನು. ಜೀವಿಯವರ
ಸಹಪಾಠಿಗಳಲ್ಲಿ ಕೆ ಎಸ್ ನಾರಾಯಣಸ್ವಾಮಿ ಮತ್ತು ರಿಸರ್ವ್ ಬ್ಯಾಂಕ್ ನ ಅತ್ಯುನ್ನತ ಹುದ್ದೆಗೇರಿದ ಹಾಗೂ
ವಿಶ್ವಬ್ಯಾಂಕ್ ಹುದ್ದೆಯನ್ನೂ ಅಲಂಕರಿಸಿದ ಪ್ರಸಿದ್ಧ ಅರ್ಥ ಶಾಸ್ತ್ರಿ ಶ್ರೀ ಕೆ.ಎಸ್. ಕೃಷ್ಣಸ್ವಾಮಿಯವರು
ಪ್ರಮುಖರು. ಅಂತಿಮವಾಗಿ ಮೈಸೂರಿನಲ್ಲಿ ನೆಲೆಯೂರಿತ್ತು ತಿಮ್ಮಣ್ಣಯ್ಯ ಕುಟುಂಬ. 1932 ರಲ್ಲಿ ಯುವರಾಜ್
ಕಾಲೇಜಿಗೆ ದಾಖಲಾದರು ಜೀವಿ. ಇತಿಹಾಸ, ಸಂಸ್ಕೃತ ಮತ್ತು ತತ್ವಶಾಸ್ತ್ರ ಇವರ ಪ್ರಮುಖ ಅಧ್ಯಯನಾ ವಿಷಯಗಳಾಗಿದ್ದವು.
ಅಂದಿನ ಇವರ ಗುರುಗಳು ನಾ.ಕಸ್ತೂರಿ, ಕುವೆಂಪು ಮತ್ತು
ಎಮ್ ಎ ವೆಂಕಟರಾವ್.
ಕನ್ನಡದ ಬಗ್ಗೆ
ಇವರ ಅಭಿಮಾನ ಆಸಕ್ತಿಗಳು ಮೂಡಲು ಕನ್ನಡ ಅಧ್ಯಾಪಕರಾಗಿದ್ದ ಅವರ ತಂದೆಯವ್ರೇ ಮೊದಲ ಪ್ರೇರಣೆ. ಇದಕ್ಕೆ
ನಂತರ ನೀರೆರೆದು ಪೋಷಿಸಿದವರು ಕುವೆಂಪುರವರು. ಬಿ.ಎ. ಹಾನರ್ಸ್ನಲ್ಲಿ 1933 ರಲ್ಲಿ ಅತ್ಯುತ್ತಮ ದರ್ಜೆಯಲ್ಲಿ
ತೇರ್ಗಡೆಯಾದ ಜೀವಿ ಹಲವು ಪಠ್ಯ ಮತ್ತು ಪಠ್ಯೇತರ ವಿಷಗಳಲ್ಲಿ ಪದಕಗಳನ್ನು ಗಳಿಸಿದ್ದರು. ತಮ್ಮ ಬಿ.ಎ.
ತರಗತಿಗಳಲ್ಲಿ ಟಿ.ಎಸ್. ವೆಂಕಣ್ಣಯ್ಯ ರವರಿಂದ ಪಂಪಭಾರತ, ಡಿ ಎಲ್. ನರಸಿಂಹಾಚಾರ್ ರಿಂದ ಸಂಪಾದಕೀಯ
ಶಾಸ್ತ್ರ, ತೀನಂ ಶ್ರೀಕಂಠಯ್ಯರವರಿಂದ ಕಾವ್ಯ ಮೀಮಾಂಸೆ, ಮತ್ತು ಎಸ್ ಶ್ರೀಕಂಠ ಶಾಸ್ತ್ರಿಗಳಿಂದ ಕರ್ನಾಟಕ
ಇತಿಹಾಸ ವಿಷಯಗಳನ್ನು ಅರಿತುಕೊಂಡರು. ಇವರ ವಿದ್ಯಾ ಸಾಧನೆಯಲ್ಲಿ ಅರ್ಧ ಅಂಕ ಕಡಿಮೆ ಬಂದುದರಿಂದ ವಿದ್ಯಾರ್ಥಿ
ವೇತನದಿಂದ ವಂಚಿತರಾದರಂತೆ. ಆದರೆ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದ
ಸಿ.ಜೆ. ರೋಲ್ ಜೀವಿಯವರಿಗೆ ಸ್ಕಾಲರ್ಶಿಪ್ ಕೊಡಿಸಿದರಂತೆ.
1936 ರಲ್ಲಿ
ಎಂ ಎ, ಗೆ ಸೇರಿದ ಜೀವಿಯವರ ತಿದ್ದು ತೀಡುಗಳಿಗೆ ಕಾರಣರಾದವರು ಕನ್ನಡ ಭಾಷಾ ದಿಗ್ಗಜರಾದ ಬಿ.ಎಂ.ಶ್ರೀ,
ಟಿಎಸ್ ವೆಂಕಣ್ಣಯ್ಯ ಹಾಗೂ ಬೆನಗಲ್ ರಾಮರಾವ್. ಎಂಎ. ಪದವಿಯಲ್ಲಿ ಸ್ವರ್ಣಪದಕದೊಂದಿಗೆ ಉತ್ತೀರಣರಾದರು
ಜೀವಿ. 1937 ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದವರು ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಕಗ್ಗ
ಕವಿ ಡಿವಿಜಿಯವರು. ಘಟಿಕೋತ್ಸವದ ಒಂದು ಘಟನೆ ಜೀವಿಯವರಿಗೆ ಸಂಭಾವಿತ ನಡೆ ಹೇಗಿರಬೇಕೆಂಬ ಮಹತ್ತರ ಪಾಠ
ಕಲಿಸಿತಂತೆ. ಅಂದು ಮುಂದಿನ ಸಾಲಲ್ಲಿ ಕುಳಿತಿದ್ದ ಯುವ ಜೀವಿಯವರು ಕಾಲಮೇಲೆ ಕಾಲು ಹಾಕಿದ್ದನ್ನು ಕಂಡ
ಡಿವಿಜಿ ಯವರು ಸಂಜ್ಜೆಮಾಡಿ -ಮಹಾರಾಜರ ಎದುರು ಹಾಗೆ ಕೂರುವುದು ಅವಮರ್ಯಾದೆ ಎನ್ನುವಂತೆ ಕಣ್ಣಲ್ಲೇ
ಸೂಚಿಸಿದರಂತೆ.
ಇದೇ ವರ್ಷ ಮಂಡ್ಯದಲ್ಲಿ
ಶ್ರೀಮತಿ ಲಕ್ಷ್ಮಿಯರು ಜೀವಿಯವರ ಗೃಹಲಕ್ಷ್ಮಿಯಾದುದಂತೆ. ಮನೆಪಾಠ ಮಾಡುತ್ತಾ ಜೀವನ ಪ್ರಾರಂಭಿಸಿದ
ಜೀವಿಯವರಿಗೆ ಆಗಿನ ಮಂಡ್ಯದ ಕಮೀಷನರ್ ಆಗಿದ್ದ ಎಮ್.ಜೆ. ಮೇಖ್ರಿಯವರು ಅಧ್ಯಾಪಕರಾಗಿ ಸೇರಲು ಕೋರಿಕೊಂಡರಂತೆ.
ಆಶ್ಚರ್ಯವೆಂದರೆ ಕನ್ನಡ ನಿಘಂಟು ಬ್ರಹ್ಮ ಎಂದು ಹೆಸರು ಪಡೆಯಲಿದ್ದ ಜೀವಿ ಪ್ರಾರಂಭಿಸಿದ್ದು ಆಂಗ್ಲ
ಬೋಧಕರಾಗಿ, ತಿಂಗಳಿಗೆ 35 ರೂಪಾಯಿಯ ಸಂಬಳದ ಮೇಲೆ. ಬದುಕ ನಡೆಸಲು ಅನಿವಾರ್ಯವೆಂಬಂತೆ ಆ ಹುದ್ದೆಯನ್ನು
ಒಪ್ಪಿಕೊಂಡರಂತೆ. ಜೀವಿಯವರು ಜೀವಗಂಡಾಂತರವೊಂದರಿಂದ ಪಾರಾದ ಘಟನೆಯನ್ನು ಡಾ ಶ್ರೀಕಂಠಶಾಸ್ತ್ರಿಗಳು
ಹೀಗೆ ವಿವರಿಸುತ್ತಾರೆ.
1941 ರಲ್ಲಿ
ದೊಡ್ಡಬಳ್ಳಾಪುರದಲ್ಲಿ ಸ್ಕೌಟ್ ಕ್ಯಾಂಪಿನಲ್ಲಿ ಅಧ್ಯಾಪಕ ವೃಂದದ ಮುಂದಾಳತ್ವ ವಹಿಸಿದ್ದ ಜೀವಿಯವರು
ಒಂದು ದಿನ ಬೆಳಗ್ಗೆ ಈಜಲು ಹೋಗಿದ್ದರಂತೆ. ನೀರು ತುಂಬಾ ತಣ್ಣಗಿದ್ದುದರಿಂದ ಕಾಲಿನ ಖಂಡಜಡತೆಯಿಂದಾಗಿ
ಮುಳುಗುವಂತಾಗಿದ್ದರಂತೆ, ಆಗ ಅವರ ಸ್ನೇಹಿತರಾಗಿದ್ದ ಅಪ್ಪಾಜಿಗೌಡ ಅವರನ್ನು ದಡಕ್ಕೆ ತಲಿಪಿಸಿದ್ದರಂತೆ.
ಬೆಂಗಳೂರಿನ ವಿಜಯಾ
ಸಂಜೆ ಕಾಲೇಜಿನ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲ ಹುದ್ದೆಗಳನ್ನು ಅಲಂಕರಿಸಿದ್ದ ಜೀವಿಯವರು
“ಉತ್ಸಾಹ” ಎಂಬ ವಿದ್ಯಾರ್ಥಿ ಪತ್ರಿಕೆಯನ್ನು ಪ್ರಾರಂಭಿಸಿದ್ದರಂತೆ. ಅಧ್ಯಾಪಕ ವೃತ್ತಿಯ ಜೊತೆಗೆ ಸಮಾಜ
ಕಲ್ಯಾಣಪರ ಕಾಳಜಿಯೂ ಜೀವಿಯವರಲ್ಲಿತ್ತು ಎನ್ನುವುದಕ್ಕೆ ಉದಾಹರಣೆಯಾಗಿ ಜಯನಗರದ “ಜಯರಾಂ ಸೇವಾ ಮಂಡಳಿ”
ಸಭಾಂಗಣದ ನಿರ್ಮಾಣ ಮತ್ತು ನಿರ್ವಹಣೆಗೆ ಕಾರಣರಾದರಂತೆ.
ಕನ್ನಡದ ಸಮಗ್ರ
ಪದಕೋಶವಾಗಿ ಕಿಟ್ಟೆಲ್ ರವರ ಕನ್ನಡ ನಿಘಂಟು ಹೊರಬಂದ
100 ವರ್ಷಗಳ ನಂತರ ಕಾಕತಾಳೀಯವೆಂಬಂತೆ ಜೀವಿಯವರ ಮೊದಲ ಕನ್ನಡ ನಿಘಂಟು “ಕನ್ನಡ ನಿಘಂಟು ಶಾಸ್ತ್ರ
ಪರಿಚಯ” 1993-94 ರಲ್ಲಿ ಲೋಕಾರ್ಪಣೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅತಿ ಕಿರಿಯ ವಯಸ್ಸಿನ
ಅಧ್ಯಕ್ಷರಾದ ಕೀರ್ತಿ ಜೀವಿಯವರದ್ದು. ಕನ್ನಡ-ಕನ್ನಡ ನಿಘಂಟು ಪರಿಯೋಜನೆಯ ಸಂಪಾದರಾಗಿಯೂ ಜೀವಿಯವರು
ಸೇವೆ ಸಲ್ಲಿಸಿದ್ದಾರೆ. “ಇಗೋ ಕನ್ನಡ,” “ಕನ್ನಡ ಕ್ಲಿಷ್ಟಪದ ಕೋಶ” ಜೀವಿಯವರ ಪದಸಿರಿಯ ಕೊಡುಗೆಗಳಲ್ಲಿ
ಪ್ರಮುಖವಾದುವು. ಲೆಕ್ಕವಿಲ್ಲದಷ್ಟು ಕೃತಿಗಳ ಕರ್ತೃವಾದ ಜೀವಿಯವರು ಹಲವಾರು ಕೃತಿಗಳ ಸಂಪಾದಕರೂ ಆಗಿದ್ದಾರೆ.
ಅವುಗಳಲ್ಲಿ “ಕನ್ನಡ ರತ್ನ ಪರಿಚಯ” “ನಳ ಚಂಪು ಸಂಗ್ರಹ”, “ಅಕ್ರೂರ ಚರಿತ್ರೆಯ ಸಂಗ್ರಹ”, “ಶ್ರೀರಾಮ
ಸಂಭವ”, “ಹೊಯ್ಸಳ ಕರ್ನಾಟಕ ರಾಜ್ಯೋತ್ಸವ ಸಂಪುಟ” “ರಾಮಾಯಣ ಅಂತರಂಗ”, “ಹೊಯ್ಸಳ ಮಾಲೆ” ಪ್ರಮುಖವಾದುವು.
ಜೀವಿಯವರ ಪ್ರತಿಭೆಯನ್ನರಸಿ
ಬಂದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ “ವಿದ್ಯಾಲಂಕಾರ”
ಪ್ರಶಸ್ತಿ, 60 ನೇ ವಯಸಿನಲ್ಲಿ ನೀಡಲಾದ “ಸಾಹಿತ್ಯಜೀವಿ” ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ಸೇಡಿಯಾಪು ಪ್ರಶಸ್ತಿ, ಶಂಭ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ, ಗೋರೂರು, ಅನಕೃ ಪ್ರಶಸ್ತಿಗಳು,
ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ
ಗೌರವ ಡಾಕಟರೇಟ್, 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಮತ್ತು ರಾಷ್ಟ್ರದ ಅತ್ಯುನ್ನತ
ಪದ್ಮಪ್ರಶಸ್ತಿಯಾದ “ಪದ್ಮಶ್ರೀ” ಇವರನ್ನು ಅರಸಿಬಂದಿವೆ.
ಫೇಸ್ಬುಕ್ ತಾಣವಾದ
“ಪದಾರ್ಥ ಚಿಂತಾಮಣಿ” ಹುಟ್ಟಿಗೆ ಕಾರಣವಾದುದು ಪದಾರ್ಥ ಚಿಂತಾಮಣಿ ಅಂಕಣಕಾರ ಪಾವೆಂ ಆಚಾರ್ಯರಾದರೆ
ಈ ಸಮೂಹದ ಸಮ್ಗ್ರ ನಡೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ಮೊದಲ ತಿದ್ದುತೀಡುಗಳನ್ನು ನೀಡಿದವರು ಪ್ರೊ.ಜೀವಿ.
2015 ರಲ್ಲಿ ನಡೆದ ಪದಾರ್ಥ ಚಿಂತಾಮಣಿ ಸಮೂಹದ ಪದಕಮ್ಮಟ ಉದ್ಘಾಟಿಸಿ ಅವರು ನೀಡಿದ ಮಾರ್ಗದರ್ಶನ ಈ
ಸಮೂಹದ ಕನ್ನಡ ಪದ ಚಿಂತನೆಗೆ ದಾರಿದೀಪವಾಗಿದೆ. ಶತಾಯುಷಿ 108 ವರ್ಷದ ತುಂಬು ಮತ್ತು ಬಹಳ ಅರ್ಥಪೂರ್ಣ
ಜೀವ ನಡೆಸಿದ ಪ್ರೊ ಜೀವಿಯವರು ಏಪ್ರಿಲ್ 19ರ ಬೆಳಗ್ಗೆ ದೈವಾಧೀನರಾದರು. ಆದರೆ ಅವರ ನಿಘಂಟು ಸಂಪದ,
ಅವರ ಕನ್ನಡ ದೇವಿಯ ಮುಡಿಗೆ ಸೇರಿದ ಕೃತಿಕುಸುಮಗಳು ಕನ್ನಡಿಗರ ಮನದಂಗಳದಲ್ಲಿ ಸದಾ ಕಂಪನ್ನು ಸೂಸುತ್ತಾ
ಇರುತ್ತವೆಯಾದ್ದರಿಂದ ಜೀವಿಯರ ದೇಹ ದೂರಾದರೂ ಅವರ ಕೊಡುಗೆ ಸದಾ ಹಚ್ಚಹಸಿರು.