Sunday, October 22, 2023

 

ಕಾಗದ

ಡಾ. ಆಜಾದ್ .ಐ.ಎಸ್.

 


ಹುಟ್ಟು ದಾಖಲು

ಜಗದೊಳಗೆ ಬಂದೆ

ಆಗ ಕಾಗದ..

ಮಗುವನಾಡಿಸುತ

ಕಾಣಿಕೆ ಕೊಟ್ಟ ನೋಟು

ಮೌಲ್ಯ ಕಾಗದ..

ಬಳಪ ಸ್ಲೇಟುಗಳ

ಮೀರಿ ಬೆಳೆದೆ ಬರೆಯಲು

ಬಲಿತ ಕೈಗಳಿಗೆ ಪೆನ್ಸಿಲ್ಲು

ಬರೆಗೆ ಕಾಗದ..

ಅಕ್ಕರಗಳಕ್ಕರದಿ

ದುಂಡಾಗಿಸೆ ಕಾಪಿ ಪುಸ್ತಕ

ಆತ ಈಶ, ಬಸವ ಕಮಲ

ಬಣ್ಣದ ತಗಡಿನ ತುತ್ತೂರಿಗೆ

ಬಾಲ ಕಾಗದ..

ಮೊದಲ ಪರೀಕ್ಷೆ

ಪರಿಚಯವಿರದ ನಿರೀಕ್ಷಕ

ಉರುಹಚ್ಚಿದ ಹಾಳೆಗಳು

ಹಾಗೆಯೇ ಮೂಡಿಸಲು

ಕಾತರದ ಉತ್ತರಕೆ ಮತ್ತೆ

ಅದೇ ಕಾಗದ..

ಪಬ್ಲಿಕ್ ಪರೀಕ್ಷೆಯ

ಮೊದಲ ಮೌಲ್ಯಮಾಪನ

ನನಗಿಲ್ಲದ  ಕುತೂಹಲ

ಅಪ್ಪ ಅಮ್ಮ ಹಿರಿಯರಿಗೆ

ಅದಕು ಮಿಗಿಲು ಗುರುಗಳಿಗೆ

ಕೊನೆಗೂ ಬಂತು ಕಾಗದ

ಆಯ್ತು ಕಾಗದ, ಪತ್ರ..

ಅಲ್ಲಿಂದ ಮೊದಲಾಯ್ತು

ಕಾಗದದ ವಿಭಿನ್ನ ರೂಪ

ಅಂಕವಿದ್ದ ಕಾಗದ- ಅಂಕಪತ್ರ

ಹೈಸ್ಕೂಲಿಗೆ ಹೋಗಲು

ಬೇಕಲ್ಲ ವರ್ಗಾವಣೆ ಪತ್ರ,

ಹೈಸ್ಕೂಲಿನ ಫೀಸ್ ಗೆಂದು

ಕೊಟ್ಟ ನೋಟುಗಳು -ಕಾಗದ

ಎಲ್ಲ ಕಾಗದ..

ಕಾಲೇಜುಗಳ ಉಪನ್ಯಾಸ

ಲೇಖಕ್, ಪ್ರಯೋಗ ದಾಖಲಿಗೆ

ರಾಶಿ ರಾಶಿ ನೋಟ್ಸುಗಳಿಗೆ 

ಬಸ್ ಕಂಡರಿಗೆ ಕೊಡಲು-ನೋಟು

ಅವನಿಂದ ಪಡೆಯಲು ಟಿಕೆಟ್ಟು

ಕ್ಯಾನ್ಟಿನಿನ ಉಪಾಹಾರದ ಕೂಪನ್ನು

ಲೆಕ್ಚರರಿಗೆ ಹಾರಿಸೋ ರಾಕೆಟ್ಟು

ಹುಡುಗಿಗೆ ಪ್ರೇಮದಿ ಕೊಟ್ಟ ಪತ್ರ

ಬಗೆ ಬಗೆಯ ಕಾಗದ..

ಚುನಾವಣೆ ಘೋಷಣೆ ಕಾಗದ

ಅಭ್ಯರ್ಥಿ ಆಶಯ ಕಾಗದ

ಘೋಷಣಾ ಪತ್ರ ಕಾಗದ

ಕರಪತ್ರ ಹಂಚುವ ನೋಟೂ ಕಾಗದ..

ಮತಗಟ್ಟೆಯಲೂ ಕಾಗದ

ಫಲಿತಾಂಶದ ಪಟ್ಟಿ ಕಾಗದ

ಗೆದ್ದವರ ಹಸ್ತಾಕ್ಷರಕೂ ಕಾಗದ

ಎಲ್ಲ ಪ್ರಕಾಶಿಸುವ ಕಾಗದ

ರಾಜಕೀಯದ ಕಾಗದ..

ಬಂತು ಸಮಯ ತಾನೇ ಗಳಿಸಲು

ಅಪ್ಪನ ಗಳಿಕೆಗೆ ನೆರವಾಗಲು

ಅಮ್ಮನಿಗೆ ಹೆಮ್ಮೆ ಎಣಿಸಲು

ಮೊದಲ ನೌಕರಿಗೆ ಆರ್ಡರು

ಮದುವೆಯ ಕರೆಯೋಲೆ

ಕಂದನ ಹುಟ್ಟು ಹಬ್ಬದ ಓಲೆ

ಮನೆ ಖರೀದಿಯ ಪತ್ರ

ನೀರು ವಿದ್ಯುತ್ತು ಬಳಕೆಯ ಬಿಲ್ಲು

ವರ್ಷಾ೦ತ್ಯಕೆ  ಟ್ಯಾಕ್ಸ್ ಫೈಲು

ಕಾಪಿ ಪುಸ್ತಕ ಮರೆತ ಡಾಕ್ಟರ ಪ್ರಿಸ್ಕ್ರಿಪ್ಷನ್ನು

ಎಲ್ಲವೂ ಕಾಗದ..

ಕೊನೆಯ ದಿನಗಳ ಎಣಿಸುವ

ಆರೈಕೆ ಹಾರೈಕೆ ಬಯಸುವ

ಹಿರಿಯ ಜೀವಗಳ ಬಳಿಯಿದೆ

ಕಾಗದ-ಪತ್ರ, ಅದಕೆ ಬರುವರು

ನೆಂಟಸ್ತನ ಹೇಳಿಕೊಂಡು ಹತ್ರ

ಒಮ್ಮೆ ಕಾಗದಕೆ ಬಿತ್ತೆಂದರೆ

ಅಂಕಿತ ಮುದ್ರೆಯ ಸಹಿ

ಆತುರ ತೋರುವವರು ಪಡೆಯಲು

ಮರಣ ಪ್ರಮಾಣ ಪತ್ರ

ಅದುವೇ ಜೀವನದ

ನಮ್ಮ ನಿಮ್ಮ

ಕೊನೆಯ ಕಾಗದ. 

==============

1 comment:

 1. ಕಾಗದದ ಇತಿಹಾಸವನ್ನು ಸಾದ್ಯಂತವಾಗಿ ವಿವರಿಸಿದ್ದೀರಿ,ಜಲನಯನ. ಆದರೆ,
  ಒಂದು ಘಟನೆಯನ್ನು ಬಿಟ್ಟಿದ್ದೀರಲ್ಲ! ನಿಮ್ಮ ಪ್ರೇಯಸಿಗೆ ನೀವು ಬರೆದ
  ಮೊದಲ ಕಾಗದ!

  ದಾಸರೂ ಕೂಡ ಕಾಗದವನ್ನು ನೆನೆಸಿದ್ದಾರೆ. ಅದೂ ಸಹ ಕೊನೆಯ ಕಾಗದವೇ!
  “ಕಾಗದ ಬಂದಿದೆ ನಮ್ಮ ಕಮಲನಾಭನದು,
  ಗೆಜ್ಜೆ ಕಟ್ಟಿ ಹೆಜ್ಜೆ ಹಾಕು ವೈಕುಂಠಕೆ ಎಂದು..”

  ReplyDelete