Sunday, May 17, 2009

ಆಲದ ಮರ











ಆಲದ ಮರ, ಬೇರುಜಾಲದ ಮರ ಒಂದು ಜಾತಿಯ ಅತ್ತಿ, ಅಂಜೂರಗಳ ಗುಂಪಿನ ಮರ. ಇದನ್ನು ಬನಿಯ-ನ್ ಮರ ಎಂದು ಮೊದಲಿಗೆ ಪೋರ್ಚುಗೀಸರಿಗೆ ಪರಿಚಯವಾದದ್ದು, ಬಹುಶಃ ಅಖಂಡ ಭರತ ಖಂಡದ ಸಮಯದ ನಮ್ಮ ನೆಲಕ್ಕೆ ಸಂಬಂಧಿಸಿದ ಮರ ಎನ್ನಬಹುದು. ಬನಿಯ-ಎಂದರೆ ವ್ಯಾಪಾರಿ ಎಂದು ಗುಜರಾತಿ, ಹಿಂದಿ ಭಾಷಿಗರು ಹೇಳುವುದು ನಮಗೆಲ್ಲಾ ತಿಳಿದದ್ದೇ. ಗುಜರಾತಿಗಳು ಸನಾತನ ಕಾಲದಿಂದಲೂ ವ್ಯಾಪಾರಿಗಳಾಗಿಯೇ ಹೆಚ್ಚು ಪ್ರಸಿದ್ಧರು ಎಂದು ಇತಿಹಾಸ ಹೇಳುತ್ತದೆ.
ಇದು ಮೂಲತಃ ಪರಾವಲಂಬಿ ಸಸ್ಯ. ಇದರ ಹಣ್ಣು ಹಕ್ಕಿ ಪಕ್ಷಿಗಳ ಬಹು ಪ್ರಿಯ ಆಹಾರ, ಇದೇ ಕಾರಣದಿಂದ ಇದರ ಬೀಜ ಪ್ರಸಾರ ಪ್ರಮುಖವಾಗಿ ಪಕ್ಷಿಗಳ ಮೂಲಕ ಆಗುತ್ತದೆ. ಬೀಜಗಳ ಚೆಲ್ಲುವಿಕೆ ಅಥವಾ ಪಕ್ಷಿಗಳ ಮಲದ ಮೂಲಕ (ಬೀಜಗಳು ಬಹುಪಾಲು ಜೀರ್ಣವಾಗದೇ ವಿಸರ್ಜಿತವಾಗುವುದರಿಂದ) ವೃಕ್ಷಗಳ, ಬೆಟ್ಟ ಗುಡ್ಡಗಳ ಮುಂತಾದೆಡೆ ಅಂಕುರಿಸಿ..ಬೆಳೆಯುತ್ತದೆ. ಇತರ ವೃಕ್ಷಗಳ ಕಾಂಡ, ಪೊಟರೆಗಳು ಬೀಜಾಂಕುರ ಮತ್ತು ಸಸಿ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ, ಬೇರುಗಳನ್ನು ಕೆಳಮುಖವಾಗಿ ಹರಡುವ ಈ ಸಸಿ ನಿಧಾನವಾಗಿ ಬೆಳೆದು ಆ ಮೂಲಕ ಹರಡಲಾರಂಭಿಸಿ ಮೂಲ ಆಶ್ರಯ ನೀಡಿದ ಸಸ್ಯ ಅಥವಾ ವೃಕ್ಷ ಕಾಣದಾಗುತ್ತದೆ. ಒಮ್ಮೆ ಬೆಳೆದು ಮರವಾದ ಆಲ, ತನ್ನ ರೆಂಬೆಗಳನ್ನು ಭೂಮಿಗೆ ಸಮಾನಾಂತರವಾಗಿ ಹರಡುತ್ತದೆ, ಆ ರೆಂಬೆಯಿಂದ ಒಂದೆರಡು ಶಾಖೆಕೆಳಮುಖವಾಗಿ ಬೆಳೆಸಿಕೊಂಡು ನೆಲವೂರಿದ ಮೇಲೆ ಬೇರುಬಿಟ್ಟು ಆ ರೆಂಬೆ ಮತ್ತೊಂದು ಮರಕ್ಕೆ ಕಾಂಡವಾಗುತ್ತದೆ, ಕಾಂಡಗಳ ಬೆಳವಣಿಗೆ, ಹರಡುವಿಕೆ, ಮತ್ತೆ ಅವುಗಳಿಂದ ಬೇರುಗಳ ಪಸರುವಿಕೆ ಹೀಗೆ..ಮರ ಹೆಮ್ಮರವಾಗಿ ಹಲವಾರು ಎಕರೆ ಹರಡುತ್ತದೆ. ಆ ಕಾರಣದಿಂದಲೇ ಈ ಮರಕ್ಕೆ ಆಯಸ್ಸು ...ಬಹಳ ಹೆಚ್ಚು....ಚಿರಾಯು ಎಂತಲೇ ಹೇಳಬಹುದು.
ಇಂತಹ ಆಲದ ಮರ ಏಕೆ ಬೀಳುತ್ತದೆ..? ಒಂದು ಸಾಧ್ಯತೆ ಹೊಸ ಕಾಂಡಗಳ ಬೆಳವಣಿಗೆ ಬಲವಂತವಾಗಿ ಅಥವಾ ಇತರೆ ಕಾರಣಗಳಿಂದ ಕುಂಠಿತಗೊಂಡರೆ, ಮೂಲ ಕಾಂಡಗಳ ಶಕ್ತಿ ಕುಸಿಯುತ್ತದೆ (ಹೊಸಕಾಂಡಗಳು ಮೂಡುವುದಿಲ್ಲ), ಮೂಲ ಬೇರುಗಳ ಹರಡುವಿಕೆಯೂ ಕುಸಿಯಿತ್ತದೆ ಹೀಗಾಗಿ ಶಕ್ತಿಗುಂದಿ ಧರೆಗುರುಳಬಹುದು. (ಗುರು- ಬ್ಲಾಗಿನಿಂದ ಪ್ರೇರಿತ, Thanks ಗುರು)




Saturday, May 16, 2009

ನಂಗೊತ್ತಿಲ್ಲ ಮಗು ಕನ್ನಡ-ನುಡಿ ನಮ್ಮದು


(Source: Web)
ಕನ್ನಡ-ನುಡಿ ನಮ್ಮದು
ನುಡಿ ನನ್ನದು .. ನುಡಿ ನಿಮ್ಮದು
ಕರುನಾಡೆಲ್ಲೆಡೆ ಆಡು ಭಾಷೆ ನಮ್ಮದು
ಪಂಪನ ಬನವಾಸಿಯ ಕಂಪು—ಕನ್ನಡ
ರನ್ನನ ಗಧಾಯುದ್ಧದ ಗುಡುಗು-ಕನ್ನಡ,
ಪುಲಿಕೇಶಿ, ವಿಜಯನಗರ, ಮೈಸೂರರಸರ ಸಿರಿ
ನೃಪತುಂಗ, ಹರಿ-ಹರ ರಾಘವಾಂಕರ ರಗಳೆಯ ಗರಿ,
ಮುದ್ದಣ-ಮನೋರಮೆಯರ ಸಲ್ಲಾಪ
ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪ
ಸರ್ವಜ್ಞನ ತ್ರಿಪದಿಗಳು, ಶಿಶುನಾಳರ ಉಕ್ತಿಗಳು
ಅಕ್ಕ-ಅಲ್ಲಮ-ಬಸವಣ್ಣರ ವಚನಗಳು
ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ
ಇವರಲ್ಲವೇ ಕನ್ನಡಿಗರ ಅಮೂಲ್ಯ ಆಸ್ತಿ ?!
ಗೋಕಾಕ್, ಕಾರ್ನಾಡ್, ಜೀಎಸ್ಸೆಸ್, ಕಂಬಾರ್,
ಅನಕೃ, ತ್ರಿವೇಣಿ, ಭೈರಪ್ಪರ ಜತೆಗೂಡಿದ ನಿಸಾರ್
ಕಥೆ, ಕವನ, ಕಾದಂಬರಿಗಳ ಸರದಾರರು
ಜ್ಞಾನಪೀಠಗಳ ಹೊಳೆಯನ್ನೇ ಹರಿಸಿದರು
ನಾಟಕಕ್ಕೆ ಕೈಲಾಸಂ ಪರ್ಯಾಯವಾದರೆ
ರಾಜ್ ರಜತ ಪರದೆ ಮರೆಯದ ಧೃವತಾರೆ
ಭಾಷೆ ನಮ್ಮದೆಂಬ ಅಭಿಮಾನವಿರಲಿ
ನವಂಬರ್ ಮಾತ್ರವೇ ಏಕೆ? ವರ್ಷವಿಡೀ ಇರಲಿ
ಉಕ್ಕಲಿ ಭಾಷಾಭಿಮಾನ..ಕಿತ್ತೊಗೆದು ..ಕಳೆ
ಮೊಳಗಲಿ..ಭೋರ್ಗರೆದು ಕನ್ನಡದ ಕಹಳೆ.

ನಂಗೊತ್ತಿಲ್ಲ ಮಗು
ಅಪ್ಪಾ..
ಹೇಳು ಮಗು..
ನವಂಬರ್ ಬಂದ್ರೆ
ಕನ್ನಡದಲ್ಲೇ ಮಾತಾಡೋಣ
ಅಂತಾರಲ್ಲಾ..ನಾಯಕರು?
ಹೌದು ಮಗು..
ಹಂಗಂದ್ರೆ ಬೇರೆ ಹೊತ್ನಲ್ಲಿ ಕನ್ನಡದಲ್ಲಿ
ಮಾತಾಡೊಲ್ಲವೇ ಇವರು?
...ಹ್ಞಾಂ...!! ಗೊತ್ತಿಲ್ಲ ಮಗು.
ಅಪ್ಪಾ....
ಹೇಳು ಮಗು....
ಮುಂಗಾರು ಮಳೆ...ಗಾಳಿಪಟ..
ದಾಖಲೆಗಳ ಧೂಳೀಪಟ..ಅಂತಾರಲ್ಲಾ...??
ಹೌದು ಮಗು..
ಕನ್ನಡದವರೇ..ಒಳ್ಳೊಳ್ಳೆ ಗಾಯಕರಿದ್ರೂ..
ಹಿಂದಿಯವರನ್ನ ಕರಿಸಿ ಹಾಡ್ಸಿದ್ದಕ್ಕಾ???!!
...ಹ್ಞಾಂ...!! ಗೊತ್ತಿಲ್ಲ ಮಗು
ಅಪ್ಪಾ..
ಏನು ಮಗು..?
ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯಕ್ಕೆ
ಆಂಧ್ರದ ಮಹಿಳೆಯನ್ನ ಉಪಕುಲಪತಿಗಳನ್ನಾಗಿ
ನೇಮಿಸಿದ್ರಲ್ಲಾ...
ಹೌದುಮಗು....ಗಂಡಸರನ್ನ ಮಾಡ್ಬೇಕಿತ್ತಾ..??
ಹೇ..ಹಂಗಲ್ಲಪ್ಪ..ಕರ್ನಾಟಕದಲ್ಲಿ ಯೋಗ್ಯ ಮಹಿಳೇರೇ
ಇರಲಿಲ್ಲವೇ??
ನಂಗೊತ್ತಿಲ್ಲ ಮಗು

Friday, May 15, 2009

ನಂಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಕಾಂಗ್ರೇಸ್ ಇತ್ತು
ಈಗಲೂ ಇದೆ ಅನ್ನು..
ಹೌದು ಮಗು,
ಜನತಾ ಅಂತ ಇತ್ತು
ಈಗ, ಆ ಜಪಾ, ಇಜಪಾ, ಉಜಪಾ
ಲೆಫ್ಟು, ರೈಟು, ಫಾರ್ವರ್ಡು ಬ್ಯಾಕ್ ವರ್ಡು
ಪ್ರಥಮ, ದ್ವಿತೀಯ, ತೃತೀಯ ಮತ್ತೆ ಈಗ
ಚತುರ್ಥ ರಂಗ ಅಂತೆ..
ಯಾಕಪ್ಪಾ?
ನಂಗೊತ್ತಿಲ್ಲ ಮಗು

ಅಪ್ಪಾ
ಒಡೆದು ಆಳೋಕೆ
ಸಂಚು ಮಾಡ್ತಾರಂತೆ ಅಲ್ವೇ ಅಪ್ಪಾ..
ಹೌದು ಮಗು..
ಮತ್ತೆ... ಬದ್ಧ ವೈರಿಗಳ ತರಹ ಇದ್ದೋರು
ಯಾರೂ ಶಾಶ್ವತ ಶತೃಗಳಲ್ಲ
ಹಾಗೇ ಶಾಶ್ವತ ಮಿತ್ರರೂ ಅಲ್ಲ ಅಂತಾರಲ್ಲ
ಹೌದು ಮಗು..
ಹಾಗಾದ್ರೆ ಅವರಿಗೋಸ್ಕರ
ಪ್ರಾಣಗಳನ್ನೇ ಕಳಕೊಳ್ಳೋ ನಾವು ಮೂರ್ಖರಲ್ಲವೇ..
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳು ಮಗು
ನೂರಕ್ಕಿಂತ ಹೆಚ್ಚಿಂದು ದೊಡ್ಡದೋ
ಐವತ್ತಕ್ಕಿಂತ ಕಡಿಮೇದು ದೊಡ್ಡದೋ?
ಸಾರ್ಥಕ ಆಯ್ತು ನಿನ್ಗೆ ಗಣಿತ ಕಲಿಸಿದ್ದಕ್ಕೆ
ನೂರು- ಐವತ್ತಕ್ಕಿಂತ ದೊಡ್ಡದಲ್ಲವೇನೋ..???
ಮತ್ತೆ.. 30-40 ಸೀಟಿರೋ ಪಕ್ಷ
ನೂರಕ್ಕಿಂತ ಹೆಚ್ಚಿರೋ ಪಕ್ಷಾನ ಆಟ ಆಡ್ಸುತ್ತಲ್ಲಾ?
ಅವರಿಗೆ ಗಣಿತ ಗೊತ್ತಿಲ್ವಾ ಅಪ್ಪ??
ನಂಗೊತ್ತಿಲ್ಲ ಮಗು

Thursday, May 14, 2009

ನವಿರು..ಕಚಗುಳಿ

ರಾತ್ರಿ ಕಂಡ ಬಾವಿ
ಬೆರೆತಾಗ ಕಣ್ಣು
ಕರಗುವುದು ಹೆಣ್ಣು.??!!
ಬೆಪ್ಪೇ, ಅದೊಂದು ಹುಣ್ಣು
ಕೆರೆದುಕೊಂಡರೆ ಏನೋ ಹಿತ
ಮರುಳಾಗಬೇಡ
ರಾತ್ರಿಕಂಡ ಬಾವಿಗೆ
ಹಗಲೇ ಬೀಳಬೇಡ

ಪ್ರೀತಿ
ತುಟಿ ಬಿಚ್ಚಲಿಲ್ಲ
ಕಣ್ಣು-ಕಣ್ಣು ಸೇರಿದ್ದವು
ಕಣ್ಣು ಮುಚ್ಚಲಿಲ್ಲ
ಮನಗಳು ಮಾತನಾಡಿದ್ದವು
ಮನ ಹಾಡಿತಲ್ಲ
ಕಣ್ಣು-ತುಟಿ ಸೇರಿರಲು

ವಿಚಿತ್ರ
ಕಣ್ಣು ಮುಚ್ಚಿದರೆ
ಚಿತ್ರ
ಮನಸಕಾಡಿದಳು
ಚಿತ್ರ
ಮನಗೆದ್ದು ಮೂಡಿದ
ಚಿತ್ರ
ಆಗದಾಯಿತು ಇದು ಹತ್ರ
ಅದಕೇ ಇದು ವಿ-
ಚಿತ್ರ

ಕರ್ತವ್ಯ

ನೆನೆಪುಮಾತ್ರದಿ
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.

Tuesday, May 12, 2009

ಹಾಗೆಯೇ..ಅನಿಸಿದ್ದು

ವ್ಯತ್ಯಾಸ
ನನ್ನಕಣ್ಣಲ್ಲೇ
ಇರುವೆ
ನೀನು ಅಂದಿದ್ದು ತಪ್ಪಾಯ್ತೇನೋ
ಅಲ್ಲಿ ಏನು ಮಾಡುತ್ತಾ
ಇರುವೆ
ಕಣ್ಣೀರು ನಿಂತಿಲ್ಲ

ನಾ(ನಿ)ದಿನಿ
ಮದುವೆಯಾದೆ
ನನ್ನವಳು ಸುಂದರಿ
ಅವಳ ತಂಗಿ ಸಿಂಗಾರಿ
‘ಲೇ‘ ಅಂತ ಕರೆದ್ರೆ ಇವಳನ್ನ
ನಾನಿದೀನಿ
ಅಂತ ಬರಬೇಕೆ ನಾದಿನಿ?

ಅಂತರ
ಸ್ನೇಹಿತರಿಬ್ಬರೂ ನಾವು
ಮದುವೆಯಾದ ನಂತರ ಸಿಕ್ಕೆವು
ಅವನೆಂದ ಲೋ..ಎಷ್ಟು ಚನ್ನಾಗಿ
ಬಿಡಿಸ್ತಾಳೋ ನನ್ಹೆಂಡ್ತಿ ಚಿತ್ರಾನ..
ಕೊಚ್ಚಿಕೊಂಡ
ಹೋಗೋಲೋ..ನನ್ಹೆಂಡ್ತೀಯೇನು ಕಮ್ಮಿ
ಅವಳೂ ಚನ್ನಾಗೇ ಬಿಡಿಸ್ತಾಳೆ ದಿನವೂ
ನನ್ನ ಗ್ರಹಚಾರಾನ

ಗಂಡ ಭೇರುಂಡ
ಲೇ ಗುಂಡ
ಗಂಡ ಭೇರುಂಡ
ಅಂದ್ರೇನ್ಲಾ? ಕೇಳಿದ್ರು ಮೇಷ್ಟ್ರು
ಹೆಂಡ್ತೀನ ಬಿಟ್ಟು ಬೇರೆ
ಉಣ್ಣೋ ಗಂಡನ ಸ್ಥಿತಿಗೆ
ಗಂಡ ಭೇರುಂಡ ಅನ್ತಾರೆ ಸಾ..
ಅನ್ನೋದೇ ಗುಂಡ??!!

ಹೆಣ್ಣು-ಗಂಡು
ಹೆಣ್ಣು...
ಒಲಿದ್ರೆ ನಾರಿ
ಮಿನಿದ್ರೆ ಮಾರಿ
ಗಂಡು...
ಒಲಿದ್ರೆ ಗಂಡ
ಮುನಿದ್ರೆ ದಂಡ

ಕವಿಚ್ಛೆ
ಪ್ರಿಯೆ ನಿನ್ನ
ಕರೆಯಲಿಲ್ಲವೇ
ನನ್ನ ಚಿನ್ನ
ನೀನೇಕೆ ಅನ್ನಲಿಲ್ಲ
ಒಮ್ಮೆಯಾದರೂ ನನ್ನ
ಓ ನನ್ನ ಪಂಪ, ರನ್ನ

Sunday, May 10, 2009

ಪುಟ್ಟಿ


ಪುಟ್ಟಿ
ಪುಟ್ಟ ಕೈ
ಮುದ್ದುಮುಖ
ಮುಚ್ಚಿಕೊಂಡೆ ಏಕೆ?
ಇಟ್ಟ ಮುದ್ದು
ಮೀಸೆಯಂಚು
ಚುಚ್ಚಿತೇನೋ ಹೇಗೆ?
ಕಣ್ಣ ಮುಚ್ಚಿ
ಕಾಡೇ ಗೋಡೇ
ಹುಡುಕೋ ಆಟ ಬೇಕೆ?
ಹೇ ಕಳ್ಳಿ ,,!!
ನೋಡಿತಿರುವಿ
ಬೆರಳ ಸಂದಿಯಲ್ಲಿ
ಹೋಗಿ ಹಿಡಿದು
ಬಿಡುವೆ ಅಕ್ಕನನ್ನು
ಮೂಟೆಸಂದಿಯಲ್ಲಿ
ಅನ್ನ ತಿನಲು ಅಳುವೆ
ಮಣ್ಣ ತಿನಲು ಒಲವೇ?
ಕೇಳಿದ್ದಕ್ಕೆ ನಿನ್ನ ಏಕೆ
ಕಣ್ಣಮುಚ್ಚಿ ಅಳುವೆ?
ಮುದ್ದು ಕೈಯ
ಬಿಡಿಸಿ ನೋಡೆ
ಕಣ್ಣಲಿಲ್ಲ ನೀರು
ಕಣ್ಣ ಹೊಳಪು
ತುಂಟತನ ಕಂಡುನನಗೆ
ಬಂತು ನಗು ಜೋರು (ಶಿವು ರವರ ಛಾಯಾಚಿತ್ರದ ಪ್ರೇರಣೆ)