Friday, July 10, 2009

ಭೇತಾಳನೊಂದಿಗೆ ಒಂದು ಸಂಭಾಷಣೆ



ಶತವಿಕ್ರಮ- ಭೇತಾಳರ ನನ್ನ ಅಸಂಬದ್ಧ ಪ್ರಲಾಪಗಳನ್ನು...ಸದ್ಯಕ್ಕೆ ನಿಲ್ಲಿಸುವ ಯೋಜನೆಯಂತೂ ಇಲ್ಲ, ಹಾಂ...!!! ಬೋರ್..ಆದ್ರೂ..ನನ್ನ ಸಹವಾಸ ಮಾಡಿದ್ದಕ್ಕೆ ಸಹಿಸ್ಕೋಬೇಕು ನೀವು...ಯಾಕೆ..?? ಸಹಿಸ್ಕೊಂಡು..ನಿಮ್ಮ ಕವನಗಳು, ಕಥೆಗಳು, ವ್ಯಥೆಗಳಿಗೆ ಬ್ಲಾಗುಗಳಿಗೆ ಸ್ಪಂದಿಸೊಲ್ಲವೇ..?? ನಾನೂ..????!!!
ತಲಹಟೆ ಸಾಕು....ಮುಂದಕ್ಕೆ ಬರಿ ಅಂತೀರಾ..?? ಏನು?...ಏನೋ ಬಹಳ ಬರಿಯೋನ ತರಹ ಬೊಗಳೆ ಬಿಟ್ಕೋತೀಯಲ್ಲಾ..?? ವಿಕ್ರಮನ ಸಂತತಿ ಶತ ಆದ್ರೂ...ಭೇತಾಳ ಹ್ಯಾಗೇ..ಬರೀ ಭೇತಾಳ, ಶತಭೇತಾಳ, ಸಹಸ್ರ ಭೇತಾಳ, ಇತ್ಯಾದಿ ಯಾಕಲ್ಲ..?? .. ಅಂತಿದ್ದೀರಾ..?? ..ರೀ ಸ್ವಾಮಿ...ಬೊಗಳೆ ಈವಾಗ ನಿಮ್ಮದೋ...ನನ್ನದೋ..ಹೇಳಿ..???
ಅಲ್ರೀ...ಪಾಪಿ ಚಿರಾಯು ...ಅಂತ ಪುರಾಣಗಳ ಕಾಲದಿಂದಲೇ ಹೇಳಿದ್ದಾರಲ್ಲವೇ...??!! ಓಕೆ..ಓಕೆ... ಕಾಲೆಳೆಯೋದು ಸಾಕು ಅಂದ್ರಾ..??? ಸರಿ ವಿಷಯಕ್ಕೆ ಬರೋಣ...

ನಮ್ಮ ಶತ ವಿಕ್ರಮ ಮುಳ್ಳಿನಜಾಲಿ ಮರಕ್ಕೆ..ಮುಳ್ಳು ಚುಚ್ಚುತಾಯಿದ್ರೂ ಚುಚ್ಚಿಸ್ಕೊಂಡೇ ನೇತಾಡ್ತ ಜೋತು ಬಿದ್ದಿದ್ದ ಭೇತಾಳನ್ನ ಇಳಿಸಿ ಹೆಗಲಿಗೇರಿಸಿ ಶವದವ್ಯಾನಿನ ಕಡೆ ಹೊರಟಾಗ..ಐದು ವರ್ಷ ಸಂಸದನಾಗಿ, ವಿಧಾನ ಸಭಾ ಸದಸ್ಯನಾಗಿ..ಸದನದಲ್ಲಿ ತನ್ನ ಕೆಲಸ ಏನೂ ಇಲ್ಲ ಅನ್ನೋ ತರಹ ಗಡದ್ದಾಗಿ ನಿದ್ದೆ ಮಾಡಿ..ಚುನಾವಣೆ ಹತ್ರ ಬಂದಹಾಗೆ...ತಲೆ ಬುಡ ಇಲ್ಲದ ತನಗೇ ತಿಳಿಯದ ವಿಷಯಗಳ ಮೇಲೆ ಪ್ರಶ್ನೆ ಕೇಳೋ ಸದಸ್ಯನಂತೆ...ಸುಮ್ಮನೆ ಹೆಣದಂತಿದ್ದ ಭೇತಾಳ ಮಾತನಾಡತೊಡಗಿದಾಗ...
ಲೋ...ನಿನ್ನ..ಕಥೆ ಕೇಳೀ..ಕೇಳೀ..ತಲೆ ಶೂಲ ಆಗಿ ನನ್ನ ದೇಹಾನೆಲ್ಲ ಚುಚ್ಚುತ್ತೆ...ಅದನ್ನ ಬಿಡು...ನಿನ್ನ ಜೊತೆ..ಸ್ವಲ್ಪ ಲೋಕಾಭಿರಾಮ ಮಾತಾಡ್ತೇನೆ...ಆಯ್ತಾ..?? ಎಂದ ಶತ ವಿಕ್ರಮ ಎಂದಿನಂತೆ ಕಥೆ-ಗಿಥೆ ಎನ್ನುವ ಭೇತಾಳನನ್ನು ತಡಿಯುತ್ತಾ...
ಸರಿ ಹೇಳು ಅದೇನು ಹೇಳೀಯೋ...
ಎಂದಿತು ಭೇತಾಳ
ಅಲ್ಲ..ನಿಮ್ಮ ಭೇತಾಳ ಲೋಕದಲ್ಲಿ...ಮಳೆ ಇಲ್ಲ್ದಿದ್ರೆ ಏನ್ಮಾಡ್ತೀರಿ...??
ತಲೆಇಲ್ದೇ ಹರಟ್ತಿರೋನು..ನೀನು ಈಗ..!!. ಅಲ್ಲ, ಶತವಿಕ್ರಮ...ಮಳೆಇಲ್ದಿದ್ರೆ..ನೀವು..ಮಾನವರು ತಲೆಕೆಡಿಸಿಕೊಳ್ಳೋದು...ನಮ್ಗೆ ಯಾಕೆ ಬೇಕು...ಮಳೆ? ಸತ್ತ ಮನುಜ, ಪ್ರಾಣಿಗಳನ್ನು ತಿನ್ನುತ್ತಾ...ರಕ್ತ ಕುಡಿಯೋ ನಮ್ಮ ಜನಕ್ಕೆ ನಿಮ್ಮಂಥ ತಾಪತ್ರಯ ಇಲ್ಲ. ನಿಮ್ಮ ಒಂದು ಜನಾಂಗದವರ ಮೇಲೆ ಮತ್ತೊಂದು ಜನಾಂಗದವರನ್ನ ಎತ್ತಿ ಕಟ್ತೀವಿ...ಒಬ್ಬರೊನ್ನಬ್ಬರು ಹೊಡ್ದು ಸಾಯ್ಸೋ ಹಾಗೆ ಮಾಡ್ತೀವಿ...ಮಕ್ಕಳು ಮರಿ ಅಂತ ಭೇದ ಇಲ್ಲ ನಮಗೆ...ಒಟ್ಟಿನಲ್ಲಿ ಮಾನವ ನಾಶ ಆಗ್ಬೇಕು...ಮಾನವೀಯತೆ ನಾಶ ಆಗ್ಬೇಕು...
ಮತ್ತೆ...ನಿಮಗೆ ನಮ್ಮ ಹಾಗೆ ನಿಮಗೆ ಸಾವು..ಅಥವಾ ಆ ತರಹ ಏನೂ ಇರಲ್ವಾ...?
ನೋಡಿದ್ಯಾ ಮತ್ತೆ..??!! ನಿಮ್ಮ ಪೂರ್ವಜರ ಬುದ್ಧಿವಂತಿಕೆಯಲ್ಲಿ...ಹತ್ತನೇ ಒಂದು ಪಾಲೂ ನಿನ್ನಲ್ಲಿಲ್ಲ ನೋಡು...ಅದ್ಕೇ ಅಲ್ವೇ ನಮ್ಮಂಥ ಭೇತಾಳಗಳು ನಿಮ್ಮಲ್ಲೇ ಇದ್ದು ನಿಮ್ಮ-ನಿಮ್ಮಲ್ಲೇ ಜಗಳ ತಂದಿಟ್ಟು ನಿಮ್ಮ ಸಂತತೀನೇ ನಾಶ ಮಾಡ್ತಿದ್ದರೂ ಅರ್ಥ ಆಗ್ತಾ ಇಲ್ಲ ನಿಮಗೆ.....ಹೂಂ...ಸರಿ ಬಿಡು..., ನಮಗೆ ಸಾವು ಇಲ್ಲ...!!! ನಿಮ್ಮ ಸಾವು ನಮಗೆ ಇನ್ನಷ್ಟು ಆಯಸ್ಸನ್ನ ಕೊಡುತ್ತೆ...ನಾವೆಲ್ಲಿರ್ತೇವೆ ಅಂತ ನಿಮಗೆ ತಿಳಿಯೊಲ್ಲ...ಆ ತರಹ ತಿಳ್ಕೋಂಡೋರಿದ್ರೆ...ಅವರ ಬಗ್ಗೆ ನಿಮ್ಮಲ್ಲಿ ಅನುಮಾನಗಳು ಬರೋಹಾಗೇ ನಿಮ್ಮ ಬುದ್ಧಿಯನ್ನ ಆವರಿಸ್ಕೋತೀವಿ...ಹೀಗೆ..ನಮಗೆ ಸಾವು ಅನ್ನೋದೇ ಇರೋಲ್ಲ... ಇನ್ನು ಒಂದು ಜನಾಂಗ ಬುದ್ಧಿವಂತರಾಗಿದ್ರೆ ಅವ್ರಲ್ಲೇ ಕೆಲವರ ತಲೆ ಕೆಡೋ ಹಾಗೆ ಮಾಡಿ ಇನ್ನೊಂದು ಜನಾಂಗದ ವಿರುದ್ಧ ಎತ್ತಿ ಕಟ್ತೀವಿ...ಆ ಜನಾಂಗಲ್ಲೇ ಕ್ಯಾನ್ಸರ್ ಉದ್ಭವ ಮಾಡ್ತೀವಿ...ಮೊದಲೇ ಎಚ್ಚೆತ್ಕೊಂಡ್ರೆ ಸರಿ...ಇಲ್ಲ ಅಂದ್ರೆ ಅದನ್ನ ಇನ್ನೂ ಹರಡ್ತೀವಿ...ಇಡೀ ಜನಾಂಗ ಮಾನವ ಕುಲದ ಶತೃ ಅನ್ನೋ ತರಹ ಎಲ್ಲವನ್ನ ಬದಲಾಯಿಸ್ತೀವಿ... ಹಾಗೂ ಒಂದ್ವೇಳೆ ಎರಡೂ ಜನಾಂಗ ಚೇತರ್ಸಿಕೊಂಡ್ರೆ ಮೂರನೇದಕ್ಕೆ ಹೋಗ್ತೀವಿ...ನಮಗೆ ಸೀಮೆಗಳು.,,ಎಲ್ಲೆಗಳು, ಮೇರೆಗಳು ಇರೊಲ್ಲ..
ಎಲ್ಲ ಜನಾಂಗಗಳೂ ಸರಿಯಾದರೆ...ಆ ದೇಶ ಬಿಟ್ಟು ಇನ್ನೊಂದಕ್ಕೆ ಹೋಗಿ ಅದನ್ನ ಚನ್ನಾಗಿರೋ ದೇಶದ ವಿರುದ್ಧ ಮಸಲತ್ತು ಮಾಡೋ ಹಾಗೆ ಮಾಡ್ತೀವಿ...ಒಂದು ಕಾಲದಲ್ಲಿ...ಶಕ್ತಿ ಆಗಿದ್ದ ರಷ್ಯಾ ಈಗೇನಾಗಿದೆ..?? ತಾನೇ ಅಂತ ಬೀಗ್ತಾ ಇದ್ದ ಸದ್ದಾಮ್ ಕಥೆ ಏನಾಯ್ತು?? ಎತ್ತರಕ್ಕೆ..ಇನ್ನೂ ಎತ್ತರಕ್ಕೆ ಅಂತಾ ಇದ್ದ ಅಮೇರಿಕ್ಕನ್ನರ ಗರ್ವ ಮುರಿಯೋಕೆ ಉನ್ನತ ಕಟ್ಟಡಗಳೆರಡನ್ನೂ ಕ್ಷಣಮಾತ್ರದಲ್ಲಿ ಧ್ವಂಸಮಾಡಲಿಲ್ವೇ..??? ಹಹಹ....
ತುಂಬಾ ವಿಕಾರವಾಗಿ ನಕ್ಕಿತು..ಭೇತಾಳ
ಏ..ನಿಲ್ಸೋ..ನಿನ್ನ ಸ್ವಯಂ ಶಂಖ....ಏನಾಯ್ತು..ಕಟ್ಟಡ ಉರುಳ್ಸಿದ್ರಿ...ಆದ್ರೆ ನೀವು ನಾಶ ಆದ್ರಾ...ನಿಮ್ಮ ಕುಲದವರನ್ನ ಪ್ರಪಂಚ ಗುರ್ತಿಸ್ತಾ..???
ನಿನ್ನ ತಲೆ...ಅದೇ..ತಪ್ಪು ನಿನ್ನದು...ನಾವೆಲ್ಲಿ ನಾಶ ಆದ್ವಿ..ನಿಮ್ಮ ಮನುಷ್ಯಾನೇ ನಾಶ ಆಗಿದ್ದು...ನಾವು ನಮ್ಮ ಕೆಲಸ ಮುಗಿದ ತಕ್ಷಣ..ಆ ದೇಹ ಬಿಟ್ವಿ ಇನ್ನೊಂದಕ್ಕೆ ಸೇರ್ಕೊಂಡ್ವಿ...ಪ್ರಭಾಕರ, ವೀರಪ್ಪನ್, ಕಸಬ್ ಸ್ನೇಹಿತರು..ಎಲ್ಲ ಸತ್ತರು...ಆದ್ರೆ ನಾವು...!!! ಪೆದ್ದ...ಬದ್ಕೇ ಇದ್ದೀವಿ...ನಿಮ್ಮ ಮಧ್ಯದಲ್ಲೇ ಇದ್ದೀವಿ....ಹಹಹ...ಹಹಹ...ಹಿ..ಹಿ..ಹಿ..
ಎನ್ನುತ್ತಾ,,,ಕರ್ಕಷವಾಗಿ ಕೂಗುತ್ತಾ ...ಇನ್ನು ಇವನ ಮಾತು ಕೇಳಿದ್ರೆ..ನಮ್ಮ ಬುಡಕ್ಕೇ ತರ್ತಾನೆ ನೀರು...ಅದರಲ್ಲೂ ಈ ವಿಕ್ರಮ ವಂಶದಿಂದ ಸ್ವಲ್ಪ ದೂರಾನೇ ಇರ್ಬೇಕು...ಎಂದುಕೊಳ್ಳುತ್ತಾ ...ಶತವಿಕ್ರಮನ ಭುಜಬಿಟ್ಟು...ಹಾರಿ...ಜಾಲಿಮರದಕಡೆಗೆ ಹೊರಟಿತು.
ಈ ಭೇತಾಳಕ್ಕೆ ಇದರ ವಂಶಕ್ಕೆ ಒಂದು ಗತಿ ಕಾಣಿಸ್ಲೇ ಬೇಕು..ಇಲ್ಲ ಅಂದ್ರೆ ನಮ್ಮ ಮನುವಂಶಕ್ಕೆ ಉಳಿಗಾಲ ಇಲ್ಲ ..ಎಂದುಕೊಂಡ ಶತ ವಿಕ್ರಮ ಮತ್ತೆ ಜಾಲಿ ಮರದೆಡೆಗೆ ಹೆಜ್ಜೆ ಹಾಕಿದ.

Tuesday, July 7, 2009

ನನ್ನವರು


(ವೆಬ್ ಚಿತ್ರ)
ನನ್ನ ಕಣ್ಣಲ್ಲಿ ಉಕ್ಕಿರಲಿಲ್ಲ
ಇನ್ನೂ ನೀರು...
ಕಕ್ಕುಲತೆಯಿಂದ ಅಮ್ಮನೆಂದಳು
ಯಾಕೆ ಕಂದ..? ಏನುಬಿತ್ತು
ಕಣ್ಣಿಗೆ ಕಣ ಚೂರು..??
ತನ್ನ ಸೆರಗನ್ನು ಬಾಯಿಗಿಟ್ಟು
ಕಾವುಕೊಟ್ಟು ನನ್ನ ಕಣ್ಣಿಗೆ
ಒತ್ತಿ ಹಿತವಾಗಿ ಸವರಿದಳು
ಕಣ್ಣಗಲಿಸಿ ಊದಿದಳು...!!
ತಣ್ಣೀರಲಿ ತೊಳೆಯಲೇ ಎಂದೆಲ್ಲಾ
ಹುಲುಬಿದಳು..ತನ್ನ ಕಣ್ಣಿಗೇ
ಎನೋ ಬಿದ್ದಂತೆ
ನನ್ನ ಕಣ್ಣು
ತೇವವಾಗುವುದಕ್ಕೆ ಮೊದಲೇ
ಹನಿಗೂಡಿತ್ತು ಅವಳ ಕಣ್ಣು.
ಅವಳು ಮಮತೆಯ ಮಾತೆ.
ಅಪ್ಪ
ಕಂಡ ಇದನೆಲ್ಲ...
ಏನು ಮಾಡ್ಕೊಂಡ್ಯೋ..?
ಗಮನ ಇಟ್ಟು ಕೆಲ್ಸಮಾಡು
ಎಷ್ಟು ಸರ್ತಿ ಹೇಳಿಲ್ಲ ನಿನಗೆ??
ಸ್ವಲ್ಪ ನೀರು ಚಿಮುಕಿಸಿ
ಕನ್ನಡಿ ಒರೆಸೋದು ಬಿಟ್ಟು
ಊದಿದರೆ ಕಣ ಚೂರು
ಬರದೇ ಇರುತ್ಯೇ ಕಣ್ಣೀರು..?
ಏನು, ಹೇಗೆ ಯಾವಾಗ
ಮಾಡಬೇಕೆಂದು ಬದುಕ
ಕಲಿಸುವನೀತ
ನನ್ನ ಜನ್ಮದಾತ.
ಅಣ್ಣನೆಂದ
ಆತ್ರ ಇವನಿಗೆ, ನಾನೆಲ್ಲಿ
ಮೊದಲು ಕನ್ನಡಿ ತಗೋತೀನೋಂತ
ಯಾವುದನ್ನೂ ಸರಿಯಾಗಿ
ಮಾಡೊಲ್ಲಾಂತಾನೆ..
ಕೊಡು ನಾನು ಒರೆಸ್ಕೊಡ್ತೀನಿ
ಬಯ್ದು ಕಾಳಜಿ-ಪ್ರೀತಿ ತೋರಿಸಿದ್ದ
ನನ್ನ ಅಗ್ರಜ.
ಯಾಕೋ ಅಣ್ಣ
ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
ಅಮ್ಮ ಬಿಡಮ್ಮ, ನಾನ್ನೋಡ್ತೀನಿ
ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
ಅಂತಾಳೆ ಪ್ರೀತಿಯ ತಂಗಿ
ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
ಆದರೆ ಒಬ್ಬೊಬ್ಬರದೂ
ಒಂದೊಂದು ತೆರನಾದ ಭಂಗಿ

Friday, July 3, 2009

ಕನಸಲ್ಲೇ ಇರಲು ಬಿಡಿ



ಅನ್ನಕೆ ಬೇಕಾದ ಮಾಡೋದಕೆ ನಾವು
ಚಿನ್ನ ತೆಗೆಯೋದಕ್ಕೆ ನಾವು
ಕನ್ನ ಕೊರ್ದು ಬಾಚ್ಕೊಂಡು
ದರ್ಬಾರು ಮಾಡೋಕೆ ನೀವು

ಅಕ್ಷರ ಕಲಿಸೋರು ನಾವು
ಮತ್ಸರ ಉಡುಗಿಸೋರು ನಾವು
ನಮ್ಮ ಶತೃಗಳ ಜೊತೆ ವ್ಯವಹಾರ
ಮಾಡಿ ಮಜಾ ಮಾಡೋಕೆ ನೀವು

ಕರೆಂಟಿಲ್ಲದ ಮನೇಲಿ ನಾವು
ಬಂಜರಲ್ಲಿ ಬೆಳಿಯೋಕೂ ನಾವು
ಓದೋಮಕ್ಕಳಿಗೆ ದೀಪಾನೂ ಕೊಡ್ದೋರು..
ಕತ್ತಲಲ್ಲಿ ಪರ್ದಾಡೋರು ನಾವು
ಸಾವ್ರಾರು ದೀಪಾನ ಹಗಲಲ್ಲೂ
ಮನೇ ತುಂಬ ಉರಿಸೋರು ನೀವು

ನೂರು ಜನ ತಿನ್ನೋದನ್ನ ಚಲ್ಲಾಡಿ
ತಿಂದೂ ತಿನ್ನದಹಾಗೆ ಒಬ್ಬರೇ ತಿಂತೀರ
ಒಬ್ಬರು ಚಲ್ಲಾಡಿ ತಿನ್ನೋದು ಕೊಡಿ
ಹತ್ತು ಬಡವ್ರ ಹೊಟ್ಟೆ ತುಂಬುತ್ತೆ
ಅನ್ನೋದನ್ನ ಯಾಕೆ ಮರೀತೀರಾ?
ಸಾವ್ರ ದೀಪ..ಒಂದೇ ಮನೆ
ಒಂದೊಂದಾದ್ರೂ ದೀಪ ಸಾವ್ರ ಮನೆ
ಬೆಳ್ಗುತ್ತೆ.. ಬೆಳ್ಯುತ್ತೆ ಇಷ್ಟಾದರೂ ಕಲೀತೀರಾ..?

ಇದ್ದೋರು ಇಲ್ದೋರ್ಗೆ ಕೊಡೋದು ಕಲಿತ್ರೆ
ಇದ್ದೋರು-ಇಲ್ದೋರು ಅನ್ನೋ ಭೇದ ಇರುತ್ತಾ?
ಕುರ್ಚೀಲಿ ಕೂತು ದರ್ಬಾರ ಮಾಡೋರು
ಗುಡ್ಲಲ್ಲಿರೋರ ಸುಖ-ದುಃಖ ಅರಿತರೆ
ಹೊಟ್ಟೇಗಿಲ್ದೆ ಸಾಯೋರು, ಬಟ್ಟೇ ಇಲ್ದೇ ಬೇಯೋರು....,
ಓಹ್..ಹೀಂಗೂ ನನ್ ಕನಸು ನನಸಾಗ್ತದಾ,,??
ಹಗಲ್ಗನಸು ಅಲ್ಲ ಇದು ಎದ್ದು ನೋಡು ನನಸು....!!
ಅಂತ ಯಾರಾದರೂ ನನ್ನ ಎಚ್ಚರಿಸೋ ಕಾಲ ಬರುತ್ತಾ???
ಹಾಗೊಂದು ವೇಳೆ ..ಇಲ್ಲ ಅಂದ್ರೆ....
ನನ್ನನ್ನ ನನ್ನ ಕನಸಲ್ಲೇ ವಿಹರಿಸಲು ಬಿಡಿ.

Thursday, June 25, 2009

ಮೋಡಕ್ಕೆ ಏಣಿ


(With Permission from Shivu for using the photo)

ಮೋಡಕ್ಕೆ ಏಣಿ
ಹಾಕಿದ್ದಾರೆ ನೋಡಿ
ಪಾಪು ಪುಟ್ಟಿ ಪುಟಾಣಿ
ಮನ ಹಿರಿದು
ತನು ಕಿರಿದು
ಕನಸುಗಳಿಗೆ ಎಲ್ಲೆ-ಎಲ್ಲಿ?
ಅದಕೇ ಏರಿಸಿ
ಆಕಾಶಕ್ಕೇ ಏಣಿ
ರಾಮ, ಜೋಸೆಫ್ ರಹೀಮ
ಸುಳಿಯೋದೇ ಇಲ್ಲ ಇವರಲ್ಲಿ
ಧರ್ಮ-ತಲೆಹಿಡುಕ ಖದೀಮ
ಮರವಿಲ್ಲ್-ಮೇಲೆ ಮರಕೋತಿ
ಕುಂಟಾ ಬಿಲ್ಲೆ ಬುತ್ತಿ-ಆಟ ಚಪಾತಿ
ಮಡಿಯಿಲ್ಲ ಗಡಿಯಿಲ್ಲ
ಜತೆಗೂಡಿ ತಿನ್ನುವರಲ್ಲ
ಹೀಗೆ ಬೇಡ ಹಾಗೆ ಇರು
ಅದು ಸಲ್ಲ ಇಲ್ಲಿ ಸೇರು
ಮಕ್ಕಳಿಗೆ ಬೋಧಿಸುವ
ಪರಿ ಪರಿ ಪೀಡಿಸುವ
ನಮ್ಮ ಸಂಕುಚಿತತೆ ಹೇರುವ
ನಿಜ-ಜೀವನದ ಪಾಠಕ್ಕೆ
ಹೋಗಿ ಸೇರಬೇಕಲ್ಲವೇ
ನಾವೂ ಅವರ ಆಟಕ್ಕೆ??

Sunday, June 21, 2009

ಬಲು-ಸಹಜಾನ್ರಪ್ಪ ಈಜೋಡಿ


(ಚಿತ್ರದ ಬಳಕೆಗೆ ಧರಿತ್ರಿಯವರ ಅನುಮತಿಕೋರಿ)



ಸುಬ್ಬು-ಸೀನು ಸೈಕಲ್ ಮ್ಯಾಲೆ
ಏರಿಗುಂಟ ಡಾಂಬರು ರಸ್ತೆ ಮ್ಯಾಲೆ
ಹಳ್ಳೀತುಂಬಾ ಎಸ್ರುವಾಸಿ
ಅದಕ್ಕೇ ಜನಾ ಹೇಳ್ತಾರೆ ನೋಡಿ
ಬಲು ಸಹಜಾನ್ರಪ್ಪ ಈ ಜೋಡಿ

ಸುಕ-ಇರ್ಲಿ ದುಃಕ ಬರ್ಲಿ
ಬರಾ ಆಗಲೀ ಕಣಜ ತುಂಬಲಿ
ಸುಬ್ಬಂಗೆ ಸೀನು ಸೀನಂಗೆ ಸುಬ್ಬ
ಅವನಿಗಿಲ್ಲದೇ ಇವನಿಗಿಲ್ಲ ಯಾವ್ದೇ ಹಬ್ಬ

ಬೆಳಗಾಗೆದ್ದು ಸೈಕಲ್ಲೇರಿ
ಎಗ್ಲಿಗೇರ್ಸಿ ಟವಲ್ಲು ಒಂಟಿತ್ತು ಜೋಡಿ
ಜಾತ್ರೆ ಸೇರಿತ್ತು ಹರಿದ
ಮ್ಯಾಲೆ ಹೊಸಳ್ಳಿ ಕೋಡಿ

ಸುಬ್ಬ ಒತ್ತೋದು ಎಬ್ಬೆರಳಿಗೆ ಓಟು
ಸೀನಂಗೆ ಮಲ್ಗೆ ಪಾರ್ಟಿಂದ್ರೆ ಸ್ವೀಟು
ಚುನಾವಣೆ ಮುಗುದ್ರೆ ಮತ್ತದೇ ಸೈಕಲ್ಲು
ರಾಜಕಾರಣೀಗಳೂ ಕಲೀಬೇಕು ಈ ಪ್ರಿನ್ಸಿಪಲ್ಲು

Tuesday, June 9, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ದೊಡ್ಡ ದೊಡ್ಡ ಪದವೀಲಿ ಇರೋರ್ಗೆ
ಹಾಂ..ಇರೋರ್ಗೆ..??
ಮಾನ ಅನ್ನೋದು ತುಂಬಾ ಇರುತ್ತಾ??
ಹೌದಪ್ಪಾ..ಅದ್ಕೇ ಅಲ್ವ ಅವರು ಆ ಪದವೀಲಿರೋದು..
ಹಂಗಾರೆ..ಮಾನ ನಷ್ಟ ಮೊಕದ್ದಮೆ ಹಾಕಿದ್ರೆ
ಹೋದ ಮಾನ ವಾಪಸ್ ಬಂದ್ಬಿಡುತ್ತಾ..?
ಗೊತ್ತಿಲ್ಲ ಮಗು.

ಅಪ್ಪಾ
ಹೇಳು ಮಗು
ಜೊoಡ್ ಬೆಳೆದ ಬೆಂಗ್ಳೂರ್ ಕೆರೆ ಅಸಹ್ಯ ಅಲ್ವಾ..?
ಹೌದಪ್ಪ..ಉದ್ಯಾನ ನಗರೀಗೆ ದೃಷ್ಠಿ-ಬೊಟ್ಟು..
ಬಿ.ಬಿ.ಎಮ್.ಪಿ. ಗೆ ಇದನ್ನ ಕ್ಲೀನ್ ಮಾಡೋಕೆ
ಅಭಿಶೇಕ್ ನಂತಹ ಕಂದಮ್ಮಗಳ ಬಲಿಬೇಕಾ?
ಗೊತ್ತಿಲ್ಲ ಮಗು

ಅಪ್ಪಾ
ಏನಪ್ಪಾ ರಾಜ?
ರಾಜ ಅಂತೀಯ ಮತ್ತೆ ಏನ್ಕೇಳಿದ್ರೂ
ಅದುಬೇಡ..ಇದು ಆಮೇಲೆ ಅಂತೀಯಾ..
ನೀನು ದೊಡ್ದವನಾಗು ಆಮೇಲೆ ನೀನೇ ರಾಜ
ಅದ್ಕೇನಾ ರಾಜಕಾರಣಿ ಮಂತ್ರಿ ಆದ್ಮೇಲೆ
ಇದು ಈಗಲ್ಲ..ಅದು ಆಗೊಲ್ಲ ಅನ್ನೋದು..?
ನಂಗೊತ್ತಿಲ್ಲ ಮಗು

ಅಪ್ಪಾ
ಇನ್ನೂ ಏನೋ ನಿಂದು ತರಲೆ?
ನೋಡ್ದ್ಯಾ ಮಕ್ಕಳ ಪ್ರಶ್ನೆಗೆ ಉತ್ತರಿಸೋದು
ದೊಡ್ದವರ ಕರ್ತವ್ಯ ಅಂತಾರಲ್ಲವಾ?
ಹೌದಪ್ಪ..ಕೇಳು..ಅದೇನ್ಕೇಳ್ತೀಯೋ..
ಸ್ಕೂಲಲ್ಲಿ ಹುಡುಗ ಚೇಸ್ಟೆ ಮಾಡ್ದ ಅಂತ
ಮೇಸ್ಟ್ರು ಅವನ್ನ ಹೊಡ್ದಿದ್ದಕ್ಕೆ ಮೇಸ್ಟ್ರನ್ನ ಕೆಲ್ಸದಿಂದ
suspend ಮಾಡ್ಸಿ ಬಿಟ್ರಲ್ಲಾ ಅವನ ಪೋಷಕರು?
ಹೌದಪ್ಪಾ..ತೀರಾ ಅತಿಯಾಯ್ತು ಬಿಡು..
ಮತ್ತೆ ಬೇರೆ ದೇಶದಲ್ಲಿದ್ದು ಓದ್ತಾಯಿರೋ ಭಾರತೀಯರ್ನ
ಯಾರೋ ದಾರಿಹೋಕರು ಹಿಗ್ಗಾ-ಮುಗ್ಗಾ ಹೊಡ್ದ್ರೂ
ಸುಮ್ಮನಿದ್ದೀವಲ್ಲಾ ನಾವು..ಇದು ಅತಿ ಅಲ್ವಾ?
ನಂಗೊತ್ತಿಲ್ಲ ಮಗು

Sunday, June 7, 2009

ರನ್- ಅಂದ್ರ‍ೇನು..??

ದೃಶ್ಯ-1

ಮೋಹನ್: ಹಲೋ..ಹಲೋ..ರುಕ್ಮಣಿಯಮ್ಮನೋರೆ...ಆಗ್ಲೆ ರನ್ ಶುರು ಆಗ್ಬಿಟ್ಟಿದೇರೀ..ಎಲ್ಲಿದೀರಾ...?? ಹಲೋ..ನಿಮ್ಮ ಜೊತೆ..ರೋಸಿ ಮೇಡಂ ಬರ್ತೀನಿ ಅಂದಿದ್ರಲ್ಲಾ...ಅವ್ರನೂ ಕರ್ಕೊಂಡ್ ಬನ್ನಿ...ಆಯ್ತಾ...ಹಲೋ...ಹಲೋ...ಮರೀಬೇಡ್ರಿ..ನೀವ್ ಬರೋಕೆ ಆಗೊಲ್ಲ ಅನ್ನೋಂಗಿದ್ರೆ...ರೋಸಿ ಅವ್ರಿಗೆ ಹೇಳಿ..ಮೋಹನ್ ಪಾರ್ಕಿನತ್ರ ಕಾಯ್ತಾ ನಿದಾನಕ್ಕೆ ಓಡ್ತಿರ್ತಾರೆ ಜಾಯಿನ್ ಆಗು ಅಂತ...ಓಕೆ...ಮರೀಬೇಡಿ...

ರುಕ್ಮಣಮ್ಮ: ಹಲೋ..ಮೋಹನ್ ಸರ್..ಹಲೋ.. ಹಾಂ ಕೇಳ್ಸ್ತಾ ಇದೆ..ಹಾಂ...ಬರ್ತೀನಿ....ಹಲೋ..ಯಾರು ರೋಸೀನಾ...ಓಕೆ..(ಸ್ವಗತ-ಬಿಳಿ ಚರ್ಮ ಅಂದ್ರೆ ಹಲ್ಗಿಂಜ್ತಾನೆ...ಈ ಬಾಸ್ ಗಳೇ ಹಿಂಗೆ....)..ಹಾಂ...ಹಲೋ ಸರ್..ಇಲ್ಲ..ಇಲ್ಲ...ನಾನೂ ಬರ್ತೀನಿ...ಏನಂದ್ರಿ...ಇಲ್ಲ ಸರ್ ಅವ್ಳನ್ನೂ ಕರ್ಕೊಂಡ್ಬರ್ತೀನಿ....ಓಕೆ...

ರೋಸಿ: (ತನ್ನ ಮೊಬೈಲ್ ಮೆಸೇಜ್ ನೋಡ್ತಾ..ಸ್ವಗತ) what a silly fellow..why he is calling this old lady ,??...Oh...he wants me to be precise...for me business is more important..let me run with him....to please.




ದೃಶ್ಯ-2


ಮೊದಲ್ನೇ ಮೇಡಂ: (ಜೋರಾಗಿ..) ಮೂರ್ತಿ ಸರ್..ನಿಲ್ಲಿ ನಾವೂ ಬರ್ತೀವಿ...ಹಲೋ..ಸರ್...
ಎರಡ್ನೇ ಮೇಡಂ: ಮೂರ್ತಿ ಸರ್ ..ಸರಸೂ ಮೇಡಂ ಒಂದೆರಡ್ದ್ಮೊಳ ಮಲ್ಲಿಗೆ ಪಾರ್ಕ್ ಹತ್ರ ಕೊಂಡ್ಕೊಂಡು ಬರೋಕೆ ನಮ್ಮನೇವ್ರಿಗೆ ಹೇಳಿ ಅಂದ್ರು..ನೀವು ಕಾಣ್ಲಿಲ್ಲ ಅದ್ಕೇ ನಾನೇ ಕೊಡ್ಕೊಂಡೆ..ನೀವು ಕೊಟ್ಟ್ಬಿಡಿ ಸರ್....




ಮೂರ್ತಿ: ರೀ..ಶೇಖರ್..ಬನ್ನಿ ಬೇಗ ಬೇಗ ಹೋಗೋಣ ಇವರ ಇಬ್ರ ಕೈಗೆ ಸಿಕ್ಕರೆ..ಉಳ್ದಿರೋ ಒಂದೆರಡು ಕೂದ್ಲೂ ತಳೇಲಿ ಉಳಿಯೊಲ್ಲ ಅವರ ಕುಯ್ದಾಟಕ್ಕೆ ಪರಚ್ಕೋತೀವಿ,...ನಮ್ಮ ಆಫೀಸ್ ಗೆಸ್ಟ್ ರೋಸಿ ಬರ್ತಾಳೆ ಅಂದ್ಕೊಂಡ್ರೆ ಇವ್ರು ಗಂಟು ಬೀಳ್ತಾ ಇದ್ದಾರೆ...
ಶೇಖರ್: ಹೌದ್ರಿ ಮೂರ್ತಿ...ನಮ್ ಬಾಸ್ ಬಿಡ್ಕೊಡ್ತಾನೆಯೇ ರೋಸೀನಾ...ಅಲ್ನೋಡಿ..ಅಲ್ಲೇ ಪಾರ್ಕ ಹತ್ರ waiting ಕಾಯ್ಕೊಂಡು.



ದೃಶ್ಯ-3

ರವಿ: ಲೇ ರಮೇಶ ನಿಂತ್ಕೊಳ್ಳೋ...ಬಾ ಅಂತ ಹೇಳಿ..ಒಬ್ಬನೇ ಹೊರಬಿಟ್ಯಾ...?? (ಸ್ವಗತ....ಬಡ್ಡಿ ಮಗ...ಬಾ ಅಂತ ಹೇಳಿ ಡೌಗಳು ಸಿಕ್ಕಿದ್ವು ಅಂತ ತಪ್ಪಿಸ್ಕೊಂಡ್ ಹೋಗೋದು ನೋಡು).
ರಮೇಶ: ಶಮಾ..ಸುಮಾ...ಬೇಗ ಬೇಗ ಹೆಜ್ಜೆ ಹಾಕಿ...ಇದೇನು ವಾಕಿಂಗ್ ರೇಸಾ..ಜಾಗ್ ಮಾಡಿ...(ಸ್ವಗತ...ಬೇಗ ಹೋಗ್ಬೇಕು... ಆನನ್ಮಗ ರವಿ ನೋಡ್ಬಿಟ್ಟ)



ದೃಶ್ಯ-4

ಪತ್ರ ಕರ್ತೆ: ನಮಸ್ಕಾರ ಸರ್ ಈ ವಯಸ್ಸಿನಲ್ಲಿ ನಿಮಗೆ ರನ್ ನಲ್ಲಿ paricipate ಮಾಡ್ಬೇಕು ಅಂತ ಅನ್ಸಿದ್ದು ಯಾಕೆ ನಿಮಗೆ??....
VeteRUN: ನನಗೆ ರನ್ ಮಾಡೂದು ಅಂದ್ರೆ ಬಹಳ ಇಷ್ಟ..ಯಾಕಂದ್ರೆ ನಾನು ನೌಕರಿ ಪ್ರಾರಂಭಿಸಿದ್ದು ‘ರನ್ನರ್‘ ಆಗಿಯೇ....
ಪತ್ರಕರ್ತೆ: ಅಂದ್ರೆ ನೀವು ಅಥ್ಲೆಟ್ ಆಗಿದ್ರಾ...?
VeteRUN: ಅಲ್ಲಮ್ಮಾ...‘ಬ್ರಿಟೀಶರ ಕಾಲ್ದಲ್ಲಿ ರನ್ನರ್ ಅಂದ್ರೆ...postman ಕೆಲಸ...ಹಹಹಹ
ಪಕ್ಕದಾತ: (ನಗುತ್ತಾ..ಯಜಮಾನ್ರು ಜೋಕ್ ಮಾಡ್ತಿದ್ದಾರೆ...) ಹಹಹಹ
VeteRUN: (ಕೋಪದಿಂದ)..ನಿಮ್ಮ ತಲೆ...ಸುಮ್ಮನಿರ್ರೀ..ಗೊತ್ತಿಲ್ಲ ಅಂದ್ರೆ ಮಾತ್ನಾಬಾರ್ದು....Runner = Postman ಗೊತ್ತಾ...
ಪತ್ರಕರ್ತೆ: ಅಂದ್ರೆ...ಇಷ್ಟೊಂದು ಜನ ಪೋಸ್ಟ್ ಮ್ಯಾನ್ (ಉಮನ್) ಗಳು ಓಡ್ತಾ ಇದ್ದಾರಲ್ಲಾ ಯಾಕೆ...??
VeteRUN: (ಹಹಹ) ಇದು..ಜೋಕು...ಇವಾಗ ನಗ್ರೀ...(ಪಕ್ಕದವರಿಗೆ)...ಎಸ್ ಮೇಡಂ ಇದು ಜೋಕೂ ಆಗ್ಬಹುದು...ಸೀರಿಯಸ್ಸೂ ಆಗ್ಬಹುದು...


ನಮ್ಮ ಪರಿಸರ ನಿಸರ್ಗ ಇದರ ಬಗ್ಗೆ ಕಾಳಜಿ ಜನಸಾಮಾನ್ಯರಲ್ಲಿ ಜಾಗೃತಿ ತರಲಿ ಎನ್ನೋ ಉದ್ದೇಶಕ್ಕೆ ಈ ರನ್ ನಿಯೋಜಿಸಿರುವುದು...ಅದನ್ನ ಹಾಗೇ ಗಂಭೀರವಾಗಿ ತಗಂಡು.. ಜನ ಕಾರ್ಯ ತತ್ಪರರಾದ್ರೆ...ಸೀರಿಯಸ್ಸು...ಇಲ್ಲ..ಇವರತರಹ..(ಪಕ್ಕದವರನ್ನು ತೋರಿಸಿ) ಜೋಕು ಅಂದ್ಕಂಡ್ರೆ ಜೋಕು....ಇಷ್ಟು ಜನ postman..postwomen ಅಂದ್ರಲ್ಲಾ..ನಿಜ..ಇವರೆಲ್ಲಾ ಈ ಸಂದೇಶವನ್ನ ಜನಕ್ಕೆ ತಲಪಿಸೋಕೆ ರನ್ ಮಾಡೋದು..ಇನ್ನು ಇವರು (ಪಕ್ಕದವರನ್ನು ನೋಡಿ..ವ್ಯಂಗದಿಂದ) ಎಷ್ಟು ಸೀರಿಯಸ್ಸಾಗಿ ಇದನ್ನು ತಗೋತಾರೆ ಅನ್ನೋದರ ಮೇಲೆ ನಿಮ್ಮ ಟಿಪ್ಪಣಿಗೆ ಅರ್ಥ ಕೊಡಬಹುದು.
ಪತ್ರಕರ್ತೆ: ಧನ್ಯವಾದ ಸರ್.
[ಶಿವು ಅವರ ಬ್ಲಾಗ್ ನಿಂದ (ಅವರ ಅಪ್ಪಣೆಯಿದೆ ಅಂದ್ಕೋತೀನಿ) ತೆಗೆದು ಬ್ಲಾಗಿಸಿದ್ದೀನಿ]