Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ














(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.

Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!



ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”



ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.



ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.


Monday, August 2, 2010

ನನ್ನವಳು ನನಗೆ ತಲ್ಲಾಖ್ ಎನ್ನೋ ಸ್ಥಿತಿಗೆ ನನ್ನನ್ನು ತಂದಿದ್ದು ಯಾರು?

"ಟ್ರಿನ್..ಟ್ರಿನ್...ಟ್ರಿನ್..ಟ್ರಿನ್..ಟ್ರಿನ್..ಟ್ರಿನ್.."



ಯಾವ್ದೋ ಲೋಕಲ್ ಫೋನು...ಮಹೇಶ್, ಇಲ್ಲ ಸುಗುಣಾವ್ರೇ ಸಾಮಾನ್ಯವಾಗಿ ಕಾಲ್ ಮಾಡೋದು...ಆದ್ರೆ ಅವ್ರು ನನ್ನ ಲ್ಯಾಂಡ್ ಲೈನಿಗೆ ..ಮಾಡೊಲ್ಲವಲ್ಲ..??..ಅಂತ ಸುಮ್ಮನಾದೆ...ಅಷ್ಟರಲ್ಲಿ ನಿಂತಿತ್ತು ಟಿನ್ ಟ್ರಿನ್,,..ಸರಿ ನಾನು ನನ್ನ ಕೆಲಸ್ದಲ್ಲಿ.......ಅಲ್ಲಲ್ಲ...ಚಾಟ್ ಗೆ ಎಲ್ಲಿದೆ ಸಮಯ...?? ಅಡುಗೆ ಮನೆಯಲ್ಲಿ..!! ಯಾಕೆ ? ಈ ಕೆಲ್ಸ ಯಾವಾಗ್ಲಿಂದ ಅಂದ್ರ...?? ಅಯ್ಯೋ ..ರಜಗಳು ಇಲ್ಲಿ ಜೂನ್ ನಿಂದ, ಫ್ಯಾಮಿಲಿನ ಮದನಪಲ್ಲಿಗೆ ಬಿಟ್ಟು ಬಂದಿದ್ದೆ..... ಇನ್ನು ಕೂಳಿಗೆ ಈ ಮರಳುಗಾಡಿನಲ್ಲಿ?? ಮಾಡಿದ್ದುಣ್ಣೋ ಮಹರಾಯ ಅಂತ ನಾನು ಮಾಡಿದ್ದನ್ನ ನಾನೇ ತಿನ್ನಬೇಕಲ್ಲ? ಅದಕ್ಕೆ..ಈಗ ಹೆಚ್ಚು ಸಮಯ ಕೇರಾಫ್ ಕಿಚನ್.



ಮತ್ತೆ "ಟ್ರಿನ್..ಟ್ರಿನ್.....ಟ್ರಿನ್..ಟ್ರಿನ್......ಟ್ರೀನ್,,ಟ್ರೀನ್..." ಯಾಕೋ ಫೋನಿಗೂ ಕೋಪ ಬಂತಾ ಅನ್ನಿಸ್ತು ಇಲ್ಲ ಅಂದ್ರೆ ಟ್ರಿನ್ ಅನ್ನೋದು ಹೋಗಿ ಟ್ರೀನ್ ಅಂತ ಕಿರ್ಚೋದು ಯಾಕೆ...? ಸರಿ ಹೊಸ ಹ್ಯಾಂಡ್ಸ್-ಫ್ರೀ ತಂದಿದ್ದು ಮತ್ತೆ ಕೋಪ ಮಾಡ್ಕೊಂಡ್ ಕೆಳ್ಗೆ ಬಿದ್ರೆ ಕಷ್ಟ ಅಂತ ಬೇಗ ಬಂದು ಫೋನ್ ಎತ್ತಿದೆ.



"ಹಲೋ..." ಕ್ಯಾ ಕರ್ ರ್ರೈ..?" no doubtಉ ಅಬಿದಾದೇ ಫೋನು...!! ಬಹುಶಃ ನನ್ನ ಮಗಳು- ಸುರು "ಅಬ್ಬ" ಬರೋದ್ರೊಳಗೆ ಬೆಂಗಳೂರಿಗೆ ಹೋಗೋಣ ಅಂತ ಅವ್ರಮ್ಮನ ಹತ್ರ ಹೇಳಿರ್ಬೇಕು ಅದಕ್ಕೆ ಅಬಿದಾ ನನಗೆ ಎಮರ್ಜೆನ್ಸಿ ಕಾಲ್ ....ಹೌದು ..ಅವಳೇ ...ನನ್ನನ್ನ ಮೊದಲಿಗೆ ನೋಡಿದ್ರೆ/ಫೋನಾಯಿಸಿದ್ರೆ "ಸಲಾಂ ಅಲೇಕುಮ್" ಅನ್ತಾ ಇದ್ಲು...??!! ಯಾಕೆ.. ? ಮತ್ತೆ "ಹಲೋ..." ಕ್ಯಾ ಕರ್ ರ್ರೈ..?" ಅಂತ ಕೇಳಿದ್ರಲ್ಲಿ ಕಾಳಜಿಗಿಂತ...ಏನೋ ...ಮಾಡಬಾರದ್ದು ಮಾಡ್ತಿದ್ದೀನಿ ಅನ್ನೋ ಹೆಂಡತಿರಿಗೆ ಇರಬೇಕಾದ ದರ್ಪದಲ್ಲಿ ಕೇಳಿದ್ಲು....



"ಕಿಚನ್ ನಲ್ಲಿದ್ದೀನಿ ಉಪ್ಪಿಟ್ಟು ಮಾಡ್ತಿದೀನಿ.... ಶುಕ್ರವಾರ ಅಲ್ವಾ..ನಮಾಜ್ ಗೆ ಮುಂಚೆ ಮನೆ ಸ್ವಲ್ಪ ಕ್ಲೀನ್ ಮಾಡೋಣ ಅಂತ ಸ್ವಲ್ಪ ಬೇಗಾನೇ ತಿಂಡಿ ರೆಡಿ ಮಾಡ್ತಿದ್ದೀನಿ..." ಅಂದೆ..



"ಯಾಕೆ ಮೋಹಿನಿ ಬರ್ಲಿಲ್ಲವಾ..??"



ಅರೆ..ಇದೇನಪ್ಪಾ...??!! ನನ್ನವಳು ಹೋಗೋಕೆ ಮುಂಚೆ ಯಾರಿಗಾದ್ರೂ ಕೆಲಸದವಳಿಗೆ ಹೇಳಿದ್ಲಾ...ಕೈ ಜಿಗುಟಿಕೊಂಡೆ.."ಆಹ್" ನೋವಾಯ್ತು...ಅಂದ್ರೆ not a dream !! ಎಲ್ಲದಕ್ಕೂ ನನ್ನನ್ನೇ ಕೇಳುತ್ತಾ ತಾನೇ ಯಾವುದೇ ನಿರ್ಧಾರ ತಗೊಳ್ಳದ ಇವ್ಳು..ಕೆಲ್ಸದವಳಿಗೆ ಹೇಳೋದಾ..??!! ಹೇಗೆ ಸಾಧ್ಯ..?? no way..!! ಆದ್ರೂ...



ಆಶ್ಚರ್ಯ..ಸಂತೋಷ ಎರಡೂ ಒಟ್ಟಿಗೆ..



"ಯಾವ ಮೋಹಿನಿ..? ನೀನು ಯಾರ್ಗಾದ್ರೂ ಹೇಳಿದ್ಯಾ.."...ಕೇಳಿದೆ



"ನೀವೇ ಹೇಳಿದ್ದೀರಲ್ಲಾ ಯಾವ್ದೋ ಮಿಟಕಲಾಡೀಗೆ...ಅದಕ್ಕೇನೇನೋ ಕೆಲ್ಸ ಇದೆ... ಬೇಗ ಕುವೈತ್ ಗೆ ಹೋಗಬೇಕು ಅಂತ ....ನಮ್ಮಮಗಳು ’ಸುರು..’ಅಬ್ಬ’ ಇನ್ನೊಂದೆರಡು ದಿನ ಇರಿ” ಅಂದ್ರೂ "ಇಲ್ಲ ಬೇಟ ಕೆಲ್ಸ ಇದೆ ಮತ್ತೆ ಆಗಸ್ಟ್ ನಲ್ಲಿ ಬೇಗ ಬರ್ತೀನಲ್ಲಾ" ..ಅಂತ ಸಬೂಬು ಹೇಳಿ ಬಂದಿದ್ದು..?? ಎಷ್ಟು ದಿನದಿಂದ ನಡೀತಿದೆ ಎಲ್ಲಾ..?? ಇಲ್ಲಾಂದ್ರೆ ಎರಡು ದಿನಕ್ಕೆ ಒಂದು ಸರ್ತಿ..ಫೋನ್ ಮಾಡಿ ಅಬಿದಾ ಆ ಅಡುಗೆ ಹೇಗೆ ಮಾಡೋದು ?..ಈ ಅಡುಗೆ ಹೇಗೆ ಮಾಡೋದು? ಅಂತ ಕೇಳ್ತಿದ್ರಿ...ಈಗ.. ನಾಲ್ಕು ದಿನ ಆದ್ರೂ ಫೋನ್ ಇಲ್ಲ..ಸರಿ ಕೆಲ್ಸದ ಒತ್ತಡ ಮಾಡ್ತಾರೆ ಅಂದ್ಕೊಂಡಿದ್ದೆ.....ಇಂಥಾ ಘನಾಂದಾರಿ ಕೆಲ್ಸ ಅಂತ ಅಂದ್ಕೊಂಡಿರ್ಲಿಲ್ಲ!!."



ಕೋಪ ಅಳು ಎಲ್ಲ ಒಟ್ಟಿಗೆ ಇತ್ತು..ಅವಳ ಧ್ವನಿಯಲ್ಲಿ...ಸಿಕ್ಕಾ ಪಟ್ಟೆ ರಬ್ಬರ್ ಬ್ಯಾಂಡ್ ಚ್ಯೂವಿಂಗ ಗಮ್ ಥರ ಎಳೆಯೋ ಟಿ.ವಿ. ಸೀರಿಯಲ್ ಕಥೆ ಒಂದೇ ಎಪಿಸೋಡಲ್ಲಿ ಮುಗಿಸುವ ಚಾಕ ಚಕ್ಯತೆ ಇತ್ತು ಅವಳ ಆರೋಪದಲ್ಲಿ...ಎಲ್ಲವನ್ನೂ ಸಾರಾ ಸಗಟಾಗಿ ಎಂಥವರ ಕಣ್ಣಿಗೂ (ಕಿವಿಗೇ ಏನು?) ನಾಟುವಂತೆ ಹೇಳಿ..ಬುಸುಗುಡ್ತಾ ಇದ್ಲು..



ನನಗೋ.. ಏಸಿಯಲ್ಲೂ –ಬಿಸಿ ಬೆವರು ಶುರು..!!!



"ಅಲ್ಲ ಮಾರಾಯ್ತೀ...ಯಾವ ಮೋಹಿನಿ...." ನನ್ನ ಮಾತನ್ನ ತುಂಡರಿಸ್ತಾ...



"ಹೆಸರೆತ್ತಬೇಡಿ..,, ಮೋಹಿನಿ ಅಂತೆ..ಮೋಹಿನಿ..!! ಅದೂ ಎಂಥ ಹೆಸ್ರು... ನಿಮಗೇನ್ರೀ ನಾನು ಕಡಿಮೆ ಮಾಡಿದ್ದೆ.?..ಅದೂ ನನ್ನ ಎತ್ತರಕ್ಕೆ ಬೆಳೆದು ನಿಂತಿರೋ ಮಗಳಿರೋವಾಗ...."



ಅವಳ ಮುಸು ಮುಸಿ ಅಳು ಜಾಸ್ತಿಯಾಯ್ತು....ಆ ಕಡೆ ನನ್ನ ಅಕ್ಕ ಮತ್ತೆ ಅಮ್ಮ ಅವಳನ್ನ ಸಮಾಧಾನ ಮಾಡ್ತಿದ್ದದ್ದು ಸ್ಪಷ್ಟವಾಗಿ ಕೇಳ್ತಿತ್ತು..



“ಬೇಟಾ..ಆಜಾದು ಚಿನ್ನದಂತ ಹುಡುಗ ಏನೋ ಗಲತ್ ಆಗಿದೆ" ಅಂತ ನನ್ನಮ್ಮ  "ನಾವು ನಿಧಾನಕ್ಕೆ ಮಾತ್ನಾಡ್ತೀವಿ...ಈಗ ಸುಮ್ಮನಾಗು.....ನನಗೆ ಕೊಡು ಫೋನ್”



ಅಂತ ಅಕ್ಕ ಫೋನ್ ತಗೊಂಡದ್ದು ಗೊತ್ತಾಯಿತು.



"ಅಕ್ಕ ..ಏನಕ್ಕ ಇವಳು ಹೇಳ್ತಿರೋದು...ಯಾರದು ಮೋಹಿನಿ...?" ನನ್ನ ಆತಂಕ ತೋಡಿಕೊಂಡೆ ನನ್ನಕ್ಕನ ಹತ್ರ...



"ನೋಡು ಆಜಾದು, ಈಗ ಮಾತ್ನಾಡೊದು ಬೇಡ..ಅಬಿದಾ ಅಪ್-ಸೆಟ್ ಆಗಿದ್ದಾಳೆ..ನಾನು ಸಮಜಾಯಿಶ್ ಹೇಳ್ತೀನಿ...ನಿನ್ನ ಮಗಳು-ಸುರೂನ ಅವಳ ಚಿಕ್ಕಪ್ಪ ತೋಟಕ್ಕೆ ಕರ್ಕೊಂಡು ಹೋಗಿದ್ದಾನೆ ಅವಳು ಇದ್ದಿದ್ದ್ರೆ ಮಗಳೇ ಸಮಾಧಾನ ಮಾಡ್ತಿದ್ಳು....ನೀನು ವರಿ ಮಾಡ್ಕೋ ಬೇಡ....., ಅಲ್ವೋ, ನೀನು ಕೆಲ್ಸದವಳನ್ನ ಮನೆ ಕೆಲಸಕ್ಕೆ ಹೇಳ್ತೀನಿ ಅಂತ ಅಬಿದಾಗೆ ಒಂದು ಮಾತು ಹೇಳಬಾರ್ದ..?? ಅದೂ..ಎಂಥ ಹೆಸರಿನವಳಿಗೆ ಹೇಳಿದ್ದೀಯಾ ನೋಡು...ಛೀ..ಮೋಹಿನಿ..ಅಂತೆ,,ಮೋಹಿನಿ..."



"ಅಲ್ಲಕ್ಕ ಅದು..." ನಾನು ಮಾತನಾಡೋದಕೂ ಬಿಡ್ಲಿಲ್ಲ...ಅಕ್ಕ



"ನೋಡೋ ಈಗ ಮೊದಲು ಆ ಮೋಹಿನೀನ ಕೆಲಸದಿಂದ ಬಿಡ್ಸು...ನಾನು ಅಬಿದಾ ಹತ್ರ ಮಾತನಾಡ್ತೀನಿ..ಮತ್ತೆ ಎರಡು ದಿನ ಬಿಟ್ಟು ಅವಳಿಗೆ ಫೋನ್ ಮಾಡಿ ಹೇಳು ಯಾರೂ ಇಲ್ಲ..ಅವಳನ್ನ ಕೆಲಸದಿಂದ ಬಿಡಿಸಿದೆ ಅಂತ......ಆಯ್ತಾ..? ಈಗ ನಾನು ಫೋನ್ ಇಡ್ತೀನಿ..."



ಇದೇನಪ್ಪಾ ಇದು...ಬೆಳ್ ಬೆಳಿಗ್ಗೆ....ಉಪ್ಪಿಟ್ಟು ಮಾಡೋಣ ಅಂತ ಇದ್ರೆ ಎಲ್ಲಾ ಚಿತ್ರಾನ್ನ ಆಗಿ ಕೂತಿದೆ...ಹೌದು ಏನಿದು..? ಮೋಹಿನಿ..ಯಾರಿದು ಮೋಹಿನಿ...??.. ತಲೆ ಚಿಟ್ಟು ಹಿಡೀತಿತ್ತು..ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ಇನ್ಸ್ಟಾಂಟ್ ಕಾಫಿ ಮಾಡಿ ಹೀರುತ್ತ ಸೋಫಾದಲ್ಲಿ ಧೊಪ್ಪೆಂದು ಕುಂತೆ...ಯೋಚನೆ ನಿಲ್ಲಲಿಲ್ಲ....



"ಅರೆ..!! ಹೌದಲ್ಲಾ..!! ಮೂರು-ನಾಲ್ಕು ದಿನದ ಹಿಂದೆ ಬಜ್ ನಲ್ಲಿ ಹೀಗೇ ತಮಾಶೆ ಮಾಡ್ತಾ..



"ಏನ್ರೀ ಆಜಾದ್ರೇ..ಒಬ್ರೇ ಮನೇಲಿ ಅಂತೀರಾ..ಭಾಭಿನಾ ಬಿಟ್ಟು ಬಂದು.., ರಾತ್ರಿ ಹೆದ್ರಿಕೆ ಆಗೊಲ್ಲವಾ..." ಅಂತ ಯಾರೋ ಕೇಳಿದ್ರು..?"



ಅದಕ್ಕೆ ನಾನು...



"ಬರ್ತಾಳಲ್ಲ ಮೋಹಿನಿ"...ಅಂದಿದ್ದೆ..



ಅವರು..."ದಿನವೂ ಬರ್ತಾಳಾ..?"



"ಹೌದು..ಆ ಗೆಜ್ಜೆ ಆ ಮಧುರ ಕೂಗು...ಬಾ..ರಾ...ಬಾ..ರಾ..." ಅಂತ ನಾನಂದಿದ್ದೆ...



"ಹಾಗಾದ್ರೆ ಅಬಿದಾಗೆ ಫೋನ್ ಮಾಡಿ ಹೇಳ್ತೇನೆ ತಡೀರಿ..." ಅವರು ಹೇಳಿದ್ರು



"ಅವಳಿಗೂ ಗೊತ್ತು ಹೇಳಿ ಪರ್ವಾಗಿಲ್ಲ" ಅಂದಿದ್ದೆ......



ಓಹ್...ಇದು ಇವ್ರದ್ದೇ ಕೆಲ್ಸ....ನನ್ನ ಬಜ್ ನಲ್ಲಿ ನನ್ನ ಇಂಡಿಯಾ ನಂಬರ್ ನೋಡಿ ಫೋನ್ ಮಾಡಿ ತಮಾಶೆ ಮಾಡಿರ್ತಾರೆ..ನಾನು ಆ ಸಿಮ್ ಕಾರ್ಡ್ ಇದ್ದ ಫೋನ್ ಅಬಿದಾಗೆ ಕೊಟ್ಟಿದ್ದೆ..ನಾನು ಸಂಪರ್ಕ ಮಾಡೋಕೆ.....



ಹಾಂ.. ಹೀಗೇ ಆಗಿದೆ..., ಇವರು ವಿಷಯ ಪೂರ್ತಿ ಹೇಳೋಕೆ ಆಗಿಲ್ಲವೋ ಅಥವಾ ಏನೋ ಎಡವಟ್ಟು ಆಗಿದೆ... ನನಗೆ ಎಲ್ಲಾ ಅರ್ಥವಾಗತೊಡಗಿತ್ತು....



ತಕ್ಷಣ ನೆಟ್ ಓಪನ್ ಮಾಡಿ ಆ ದಿನದ ಬಜ್ ನ ಎಲ್ಲ ಸಂಭಾಷಣೇನಾ ವರ್ಡ್ ನಲ್ಲಿ ಪೇಸ್ಟ್ ಮಾಡಿ ಸುರುಗೆ ಮೈಲ್ ಮಾಡಿದೆ.  ಎಡವಟ್ಟು ಏನು ಅಂತ ವಿವರಿಸಿ ನನ್ನ ತಮ್ಮನಿಗೂ ಒಂದು ಕಾಪಿ ಹಾಕಿ...ಸುರುಗೆ ಸಂಜೆ ಫೋನ್ ಮಾಡ್ತೇನೆ ಅಂತ ಮೈಲ್ ನಲ್ಲಿ ತಿಳಿಸಿ ಮೈಲ್ ಮಾಡಿ...ಅರ್ಧ ಸಮಾಧಾನದ ನಿಟ್ಟುಸಿರು ಬಿಟ್ಟೆ...



ಆ ಸಂಜೆ ಮೂರು ಇಪ್ಪತ್ತಾಗಿತ್ತು, ಸಂಜೆ ನಾಲ್ಕೂವರೆಗೆ ಫೋನ ಮಾಡೋಣ ಅಂತ ಚಪಾತಿಗೆ ಹಿಟ್ಟು ಕಲಸಿಡಲು ಕಿಚನ್ ಗೆ ಹೋದೆ..."ಟ್ರಿನ್ ಟ್ರಿನ್..ಟ್ರಿನ್.."



ಏನಿದು ಅಬಿದಾಳದ್ದೇ ಫೋನು...ಹೆದರುತ್ತಾ ಫೋನು ಎತ್ತಿದೆ



"ಅಸ್ಸಲಾಮು ಅಲೇಕುಮ್" ಅಬಿದಾಳ ದ್ವನಿ ..ಮೆದುವಾಗಿತ್ತು... ಧೈರ್ಯ ಬಂತು..



"ವಾಲೈಕುಮ್ ಅಸ್ಸಲಾಮ್ ಡಿಯರ್..." ನಾನು ಇನ್ನೂ ಮುಂದಿನ ಶಬ್ದ ಹೇಳುವುದಕ್ಕೆ ಮುಂಚೆ..."ಮಾಫ್ ಕರೋ ಡಿಯರ್, ನಾನು ನಿಮ್ಮನ್ನ ತಪ್ಪು ತಿಳಿದೆ...ಯಾರೋ ಹೇಳಿದ್ರು ಅಂತ... ನನ್ನದೂ ತಪ್ಪಿದೆ..
ಆ ದಿನ ನಿಮ್ಮ ಫ್ರೆಂಡ್ ಇರ್ಬೇಕು ಅವರು ಫೋನು ಮಾಡಿ "ಭಾಭಿ ತಮಾಷೆ ಗೊತ್ತಾ...? ನಿಮ್ಮವ್ರು ಕುವೈತಲ್ಲಿ ಮೋಹಿನಿ ಅನ್ನೋಳನ್ನ ಕೆಲ್ಸಕ್ಕೆ ಇಟ್ಕೊಂಡಿದ್ದಾರೆ..." ಅನ್ನೋದ್ರಲ್ಲಿ ಫೋನ್ ಕಟ್ ಆಗಿತ್ತು...ನನಗೆ ಹೆಂಗಸಿನ ದ್ವನಿ, ಹೇಳಿದ್ದು ನಿಮ್ಮ ಬಗ್ಗೆ...ಮೋಹಿನಿ ಅನ್ನೋಳನ್ನ ಇಟ್ಕೊಂಡಿದ್ದಾರೆ ... ಇಷ್ಟೇ ಕಿವಿಗೆ ಹೋಗಿದ್ದು....ಕೆಲಸದವಳು ಅನ್ನೋದನ್ನ ಗಮನಿಸಲೇ ಇಲ್ಲ....I am very very sorry..."



ಅಬ್ಬಾ...ಎಂಥ ಹಾಲು ಕುಡಿದ ಅನುಭವ...!! ನಾನೆಂದೆ..



"its Ok dear...misunderstand ಆಗುತ್ತೆ ...ಹೌದೂ.... ನಿನಗೆ ಇದೆಲ್ಲಾ...ಹೇಗೆ ??".



"ಸುರುಗೆ ನೀವು ಕಳ್ಸಿದ ಮೈಲ್ ಸಿಕ್ತು ಅವಳು ಅವಳ ಅತ್ತೆ ಏನೇನೋ ಮಾತನಾಡ್ತಾ ಇದ್ರು..ಆ ಮೇಲೆ ನಿಮ್ಮ ತಮ್ಮನ ಫೋನ್ ಬಂತು...ಮತ್ತೆ ಸುರು ನನ್ನ ಕರೆದು...ನಿಮ್ಮ ಮೈಲ್ ತೋರಿಸಿದಳು....ನನಗೆ ಆಗ್ಲೆ ಅರ್ಥ ಆಗಿದ್ದು ಎಂಥ ಮೂರ್ಖಳು ನಾನು ನಿಮ್ಮನ್ನು ಅಪಾರ್ಥ ಮಾಡ್ಕೊಂಡೆ...sorry" ಎಂದಳು ನಗುತ್ತಾ...



ಅಬ್ಬಾ...ಶುಕ್ರವಾರದ ನಮಾಜ್ ನಲ್ಲಿ ನನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಎಂದುಕೊಂಡು...ಕೀಟಲೆ ಮಾಡಿದೆ ನನ್ನವಳಿಗೆ..



"ಹಾಗಾದ್ರೆ ಮೋಹಿನೀನ ನಾಳೆಯಿಂದ ಬರೋಕೆ ಹೇಳ್ಲಾ ಮನೇಗೆ..?"



ನಗುತ್ತಾ ಅವಳು.." ಯಾಕೆ? ಈಗ್ಲೇ ಹೇಳಿ.... ರಂಜಾನ್ ಬರ್ತಿದೆ ನಿಮ್ಮ ಉಪವಾಸದ ೭-೮ ದಿನಗಳ ಅಡುಗೆನಾದ್ರು ಮಾಡಿ ಹಾಕ್ತಾಳೆ....ಹಹಹ..."



ಇದು ಒಂದು ಬಜ್.ಚಾಟ್ ಎರಡರ ..ಕಪೋಲ ಕಲ್ಪಿತ..ಇದನ್ನೇ ನೆವಮಾಡಿ ನನ್ನವಳಿಗೆ ಫೋನ್ ಮಾಡೋರಿಗೆ ಎಚ್ಚರಿಕೆ......

Wednesday, July 28, 2010

ಗೊತ್ತಿಲ್ಲ ಮಗು

(ಚಿತ್ರ ಕೃಪೆ : ಅಂತರ್ಜಾಲ)

ಅಪ್ಪಾ..



ಏನು ಮಗು..?


ಮಳೆಗಾಲ..ಕೆಲವುಕಡೆ ಎಡೆಬಿಡದ ಮಳೆ ಅಂತೆ...


ಹೌದು ಕಣೋ ರೈತರಿಗೆ ನಿರಾಳ..


ಆದ್ರೆ ಅಪ್ಪ?


ಏನು ನಿನ್ನ ರಾಗ?


ಪ್ರತಿ ಸಲವೂ ಗೊಬ್ಬರಗಳಿಗೆ ಪರದಾಟ ತಪ್ಪಿದ್ದಲ್ಲ


ಹೌದು ಕಣೋ ಸರ್ಕಾರ ವ್ಯವಸ್ಥೆ ಮಾಡುತ್ತಲ್ಲಾ..


ಅಲ್ಲಪ್ಪ ಅವರ ತಿಪ್ಪೆ ಇವರು ಇವರ ತಿಪ್ಪೆ ಅವರು ಅಗೆಯುತ್ತಿದ್ದಾರಲ್ಲ


ಸರ್ಕಾರದಲ್ಲಿರೋರಿಗೆ ಇದಕ್ಕೆ ಸಮಯ ಸಿಗುತ್ತಾಪ್ಪಾ..?


ಗೊತ್ತಿಲ್ಲ ಮಗು.






ಅಪ್ಪಾ..


ಮತ್ತಿನ್ನೇನೋ..


ದಂಡಿ ಯಾತ್ರೆ ಅಂದ್ರೆ ಏನಪ್ಪಾ..?


ದಂಡಿ ಅಲ್ಲವೋ ದಾಂಡಿ...ಮಹಾತ್ಮ ಗಾಂಧಿ


ಉಪ್ಪಿಗೆ ಹಾಕಿದ್ದ ಶುಲ್ಕ ವಿರೋಧಿಸಿ ಬ್ರಿಟೀಶರ ವಿರುದ್ಧ ನಡೆಸಿದ್ದ ಪಾದ ಯಾತ್ರೆ


ಹಾಗಾದ್ರೆ ಈಗ ನಮ್ಮ ರಾಜಕಾರಣಿಗಳು ಮಾಡ್ತಿರೋದು


ದಂಡ ಯಾತ್ರೆನಾ ಅಪ್ಪಾ..?


ಗೊತ್ತಿಲ್ಲ ಮಗು






ಅಪ್ಪಾ..ಇನ್ನೊಂದೇ..ಡೌಟು...


ಏನಪ್ಪಾ ಅದು, ಕೇಳು...


ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?


ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ


ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ


ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?


ನಂಗೊತ್ತಿಲ್ಲ ಮಗು..






ಇದು ನಿಜವಾಗ್ಲೂ ಕಡೇದು


ಹೇಳು...ಯಾಕಂದ್ರೆ ನೀನು ಕೇಳೋದಕ್ಕಿಂತಾ ಹೇಳೋದೇ ಹೆಚ್ಚು


ಅಲ್ಲಪ್ಪ..ಪಾದ ಯಾತ್ರೆ ಪ್ರತಿಭಟನೆ ರೂಪ ಅಂತಾರಲ್ಲಾ?


ಹೌದು... ಅದೇ ಅಲ್ವಾ ಈಗ ನಡೆದಿರೋದು..


ಮತ್ತೆ ಅದನ್ನ ಪ್ರತಿಭಟಿಸೋಕೆ ಸಮಾರಂಭ ಮಾಡ್ತೀವಿ ಅಂತಾರಲ್ಲ


ಗೊತ್ತಿಲ್ಲ ಮಗು.

Wednesday, July 14, 2010

ಎರಡುಸಾಲು-ನ್ಯಾನೋಗಳು

(ಚಿತ್ರ: ಅಂತರ್ಜಾಲ ಕೃಪೆ)

ಸ್ನೇಹಿತರೇ, ನಿಮ್ಮೆಲ್ಲರ ಅಭಿಮಾನ, ಸ್ನೇಹ ಮತ್ತು ವಿಶ್ವಾಸಕ್ಕೆ ಮಾರುಹೋಗಿರುವ "ಜಲನಯನ" ತನ್ನ ಬ್ಲಾಗ್ ಪೋಸ್ಟ್ ಗಳ ಶತಕವನ್ನು ಈ ಲೇಖನದ (ಹೊಸ ಪ್ರಯೋಗ) ಮೂಲಕ ಪೂರೈಸುತ್ತಿದೆ.



ನೀಳಗವನ, ಇಡಿಗವನ, ಮಿಡಿಗವನ, ಮಿನಿಗವನ, ಚುಟುಕು ಇವೆಲ್ಲದರಂತೆ ...ಎರಡುಸಾಲು-ನ್ಯಾನೋಗಳು ಎಂಬ ಹೊಸ ಪ್ರಯೋಗ (ಗೊತ್ತಿಲ್ಲ ಹೊಸದೋ ಅಥವಾ ನನಗೆ ಹೊಸದೋ ಎಂದು...ಹಹಹ). ಇದರಲ್ಲಿ ಪ್ರತಿಯೊಂದು ನ್ಯಾನೋಗವನದ ಎರಡು ಸಾಲು ಸ್ವತಂತ್ರವಾಗಿದ್ದರೂ ಪೂರ್ಣ ಅರ್ಥ ನೀಡುತ್ತವೆ ಎನ್ನುವುದು ನನ್ನ ಅನಿಸಿಕೆ....ಪ್ರೋತ್ಸಾಹ ..ಮುಂದುವರೆಯುತ್ತದೆಂದು ಆಶಿಸುತ್ತೇನೆ.


ನಿಮ್ಮ ಮುಕ್ತ..(ಚನ್ನಾಗಿಲ್ಲ ಎಂದು ಮುಖದ ಮೇಲೆಯೇ ಹೇಳಿದರೂ ಒಳ್ಳೆಯದೇ...ಯಾಕಂದ್ರೆ ಮತ್ತೆ ಮುಖ ಭಂಗ ಆಗೋ ಸಾಧ್ಯತೆಗಳು ಕಡಿಮೆ ಅಲ್ಲವೇ...?)


ನಿಮ್ಮ - ಜಲನಯನ




ಎರಡುಸಾಲು-ನ್ಯಾನೋಗಳು


ನೋಡವಳಂದಾವ


ಆ ಕಣ್ಣು ಏಕೋ ಏನೋ ಎಂಥಾ ಹೊಳಪು

ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು




ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ

ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ




ಹುಬ್ಬು ತೀಡಿ ತಂದು ಮುಖಕೆ ಮೆರುಗು

ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು




ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು

ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು




ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ

ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ




ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ




ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು

ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

Thursday, July 8, 2010

ಎಲ್ಲಾ ಮಾಯವೋ

ಕಾಡು..ಕಾಡಿದ್ದು ನಾಡು
ನಾಡು ನೋಡಿದ್ದು ಬೀಡು
ಬೀಡು ಈಗಾಯ್ತು ಮತ್ತೆ ಕಾಡು
ಇಲ್ಲ ಮರ ಗಿಡ, ಹಸಿರು
ತೋರಿ ಎತ್ತರಗಳ ಕಾಂಕ್ರೀಟು ಜಾಡು.

ಕಾಡು, ಎಲ್ಲಿವೆ ನೋಡು
ನೋಡುತ್ತಿರುವಂತೆ ಮಾಯ
ಮರ, ಬಂದವು ಗಿಡ, ಕೃಷಿಗೆ
ಸಾಯೋ ಸ್ಥಿತಿಗೆ ವ್ಯವಸಾಯ.

ಕೆರೆಯಾದವು ಮರೆ,
ತೊರೆ ನೆಲಬಿರಿದಿರೆ
ಒತ್ತುವರಿಕೆ ಸುತ್ತುವರಿದು
ಮಾಫಿಯಾ ಕೊಳ್ಳೆ ಸುಲಿದು.

ಹೊಲ-ಗದ್ದೆ ಮಾರಿ ಮೆದ್ದೆ
ಹಣದಾಸೆ, ಈಗ- ಇಲ್ಲ ಆಹಾರ ನಿದ್ದೆ
ಆಗ ನಿನ್ನ ಕೂಲಿ
ಈಗಾಗಿರುವ ನಿನ್ನದೇ ಸಿರಿಯ ಮಾಲಿ.

ಬಿಡುತ್ತಿಲ್ಲ ಭೂ ಗರ್ಭವನೂ
ಅಗೆದು ಹೊರಹಾಕಿ ಕರುಳನೂ
ಅಯ್ಯೋ ಮರುಳೇ..ಏಕೆ ತೋಡುತಿರುವೆ
ನಿನ್ನವನತಿ ಗೋರಿಯ ಕುಳಿಯನ್ನು ನೀನೇ?

ಈಗಲೂ ಕಾಲ ಮಿಂಚಿಲ್ಲ
ತಾಯವಳು ಮನ್ನಿಸುವಳು ಎಲ್ಲ
ನೆಡು - ಬೆಳೆಯಲಿ ಕಾಡು
ರೈತ-ಕಾರ್ಮಿಕ ಬೆಳಗಲು ನಾಡು
ಅನ್ನ, ಗಾಳಿ, ನೀರಿಗೆ ಬೇಕು ಎಲ್ಲ
ಸತ್ತಾಗ ಕೊಂಡುಹೋಗುವುದೇನಿಲ್ಲ
ದಡಿಮಣ್ಣು ಹಿಡಿ ಬೂದಿ ಕಡೆಗಷ್ಟೇ ಎಲ್ಲಾ

Saturday, June 19, 2010

ವಿಸ್ವಾಮಿತ್ರನ ಎಡ್ವಟ್ಟು

“ನಮ್ಸ್ಕಾರ ಕಣಣ್ಣೋ ವಿಸ್ವಾಮಿತ್ರಣ್ಣ...ಸಂದಾಕಿದ್ದೀಯಾ..? ಏನು ಎರಡ್ತಿಂಗ್ಳು ಸರ್ಕಾರಿ ಮೇಜ್ವಾನಿ ಆಯ್ತಂತೆ...?? ಎಂಗಿತ್ತು...?? ಅದೂ ನಿನ್ನ ತಗೊಂಡೋಗಿ ಎಂಗ್ಸರ್ ಕ್ವಾಣ್ಯಾಕ್ಕೆ ಆಕುದ್ರಂತೆ..? ಅದ್ಕೇಯಾ ಯೋಳಿದ್ದು ಕೂದ್ಲು ಆ ಪಾಟಿ ಬುಡ್ಬ್ಯಾಡಾ ಅಂತ ಕೇಳ್ದ್ಯಾ ನನ್ ಮಾತ್ನ...ಅಲ್ಲ ...ಮೀಸೆ ಬೋಳಿಸ್ಬಿಟ್ಟು..ಆ ಪಾಟಿ ಊದ್ದಕ್ಕೆ ಕೂದ್ಲು ಬಿಟ್ಟು ..ನಿಲುವಂಗಿ ಆಕ್ಕಂಡ್ರೆ...ಅದ್ಯಾವ್ನನ್ ಮಗ ನಿನ್ನ ಗಂಡ್ಸು ಅಂದಾನು....? ಆ ಪ್ಯಾದ್ಗುಳ್ಗೆ ಎಂಗ್ ಗೊತ್ತಾದದು...?! ಪಾಪ...!!”

ವಿಸ್ವಾಮಿತ್ರನಿಗೆ ಕೋಪ ನೆತ್ತಿಗೇರಿತ್ತು....ಎಷ್ಟು ರೋಪಿತ್ತು ..??!! ಆರು ತಿಂಗಳಿಗೆ ಮುಂಚೆ....ಎಲ್ಲಾರೂ...ಆ ಪೋಲೀಸು ಆಫೀಸರ್ರು ಬಂದಿರ್ಲಿಲ್ಲವಾ..ನನ್ನ ಪ್ರಮೋಶನ್ ನಿಂತೋಗಿದೆ..ಮಿನಿಸ್ಟ್ರು ಎಡವಟ್ಟು ಕೆಲಸ ಮಾಡ್ತಾ ಇದಾರೆ, ನೀವಾದರೂ ಸ್ವಲ್ಪ ಶಿಫಾರಸು ಮಾಡಿ ಸ್ವಾಮೀಜಿ ಅಂತ ಉದ್ದಕ್ಕೆ ನನ್ನ ಕಾಲು ನೆಕ್ತಾ ಬಿದ್ದಿರಲಿಲ್ಲವಾ ಎದ್ದೇಳು ಅನ್ನೋತನಕ...?? ಧ್ಯಾನ ದಲ್ಲಿದ್ರೂ ಈ ಮೂರು ತಿಂಗಳಲ್ಲಿ ತನ್ನ ಮಾನ ಮೂರು ಕಾಸಿಗೆ ಹರಾಜಾದ ಮಾಹಿತಿ ದಪ್ಪ ದಪ್ಪ ಅಕ್ಷರಗಳಲ್ಲಿ ಅಚ್ಚು ಹಾಕಿದ್ದ ..ಹತ್ತಿರ ಬಿದ್ದಿದ್ದ‘ಘಂಟಾನಾದ‘ ಪತ್ರಿಕೆಯ ಮೇಲೆ ಕಣ್ಣಾಡಿಸಿದ್ದ ..ವಿಸ್ವಾಮಿತ್ರ. ಹೌದು ಅವನೇ..ಅದೇ ವರದಿಗಾರ..ನನ್ನ ಖಾಸ ಕೋಣೆಗೆ ಬಂದು..ವಿಲಾಯಿತಿ ..ದ್ರಾಕ್ಷಾರಸವನ್ನು ಜೊಲ್ಲು ಸುರಿಸಿಕೊಂಡು ಕುಡಿದವ, ಕುಡಿದದ್ದು ಸಾಲ್ದು ಅನ್ನೋ ಹಾಗೆ ಕಪ್ ನೆಕ್ಕಿದ್ದ ನಿರ್ಭಯ ಕುಮಾರ್...!!!?? ಛೇ ನಾಯಿಗಾದರೂ ನಿಯತ್ತಿರುತ್ತೆ ..ಇವರಿಗಿಲ್ಲದಾಯಿತೇ...?? ಅಕಟಕಟ...!!!


ಕಣ್ಣು ತೆರೆದು ತನ್ನ ಗೆಳೆಯ ... ಸಿಂಗ್ರುನ ನೋಡಿದ ವಿಸ್ವಾಮಿತ್ರ.....ಹೌದು...ಕ್ಲಾಸ್ ಮೇಟು ಸಿಂಗ್ರು ಇವನಿಗಿಂತಾ ಎರಡು ವರ್ಷ ಜೂನಿಯರ್ರು...ಆದ್ರೂ ಕ್ಲಾಸ್ ಮೇಟು ಹ್ಯಾಗೆ ಅಂತೀರಾ..? ನಮ್ ವಿಸ್ವಾಮಿತ್ರ 8, 9 ನೇ ಕ್ಲಾಸಿನಲ್ಲಿ ಒಂದೊಂದು ಸಲ ಡುಮ್ಕಿ ಹೊಡೆದಿದ್ದಕ್ಕೆ ಸಿಂಗ್ರು ಕ್ಲಾಸ್ ಮೇಟ್ ಆದ....ಎಸ್ಸೆಸೆಲ್ಸಿ ಬೆಟ್ಟ ಹತ್ತಾಕಾಗ್ದೆ...ವಿಸ್ವಾಮಿತ್ರ ಹಿಮಾಲಯ ಹತ್ತಿ ಬಂದಮೇಲೇನೆ ಈ ಅವತಾರ!!.....ಶ್ರೀ..ಶ್ರೀ..ವಿಸ್ವಾಮಿತ್ರ ಗುರು ಆಗಿದ್ದು....ಸಿಂಗ್ರ ..ಬಿ,ಇ, ಮಾಡಿ ಪಕ್ಕದ ನಲ್ಲಗೆರೆ ಡ್ಯಾಮ್ ನ ಪ್ರಾಜೆಕ್ಟ್ ಇಂಜನೀಯರ್ ಆಗಿದ್ರೂ ಮಿತ್ರನ್ನ ..ಸಾರಿ...ಗುರೂಜೀನ ನೋಡಿ ಆಶೀರ್ವಾದ ಪಡಕೊಂಡು ಹೋಗ್ತಿದ್ದ...ಖಾಸಗಿಯಲ್ಲಿ ಇಬ್ರೇ ಇದ್ದಾಗ...ವಿಸ್ವಾಮಿತ್ರನ ಜೊತೆ ಅದೇ ಹಳ್ಳಿ ಭಾಷೇಲೇ ಇಬ್ರೂ ಮಾತನಾಡ್ತಿದ್ದದ್ದು. ಹಾಗೂ ಇಬ್ರೇ ಇದ್ದಾಗ ವಿಸ್ವಾಮಿತ್ರ ಹೇಳಿದ್ದುಂಟು...ಸಿಂಗ್ರು ನಮ್ಮ ಗುಟ್ಟು ನಮ್ಮಲ್ಲೇ ಇರ್ಲಪ್ಪ... ಅಂತ.....

ವಿಸ್ವಾಮಿತ್ರ ಹೇಳಿದ ...ನೋಡೋ ಸಿಂಗ್ರ....ಆ ಮಿನಿಸ್ಟ್ರು ನನ್ ತಾವ ಎಸ್ಟ್ ದಪ ಬಂದಿಲ್ಲ .. ಏನೋ ಒಂದ್ ಸಣ್ಣ ಎಡವಟ್ಟು ಆಗೋಯ್ತು...ಗುಟ್ಟಾಗಿರ್ಬೇಕಾದದ್ದು ಬಯಲಾಗೋಯ್ತು...ನಾಯಿ ಎಂಜಲ್ ಕಾಸಿಗೆ ಆಸೆ ಬಿದ್ದು ನನ್ನ ಕಚ್ಚಿಬಿಡ್ತು...ನನ್ನ ಸೆಲ್ ಗೆ ಮಿನಿಸ್ಟ್ರು ಬಂದಿದ್ದಾಗ ಗುಟ್ಟಾಗಿ ಯೋಳಿದ್ದೆ...ಅತ್ಗ್ಯಮ್ಮನಿಗೆ ಯೋಳಿಬಿಡ್ತೀನಿ ನನಗೆ ನೀನೀಗ ಸಹಾಯ ಮಾಡ್ದೆ ಇದ್ರೆ..ಅಂತ...ಅದಕ್ಕವನು ಏಯ್..ಬಿಡ್ ಬಿಡು ಅಳ್ಳಕ್ಕೆ ಬಿದ್ದಿದ್ದೀಯಾ ಆಳಿಗೊಂದು ಕಲ್ಲು ಆಕ್ತಾವ್ರೆ...ನನ್ನೆಂಡ್ರಿಗೂ ಯೋಳೀವ್ನಿ...ಎಲ್ಲಾರ ವಿರುದ್ಧಾನೂ ಆಪಾದ್ನೆ ಮಾಡ್ತಾ ಅವ್ನೆ ಆ ಗುರು..ನನ್ ಬಗ್ಗೆ ಯೋಳಿದ್ರೆ ನಂಬ್ಗಿಂಬೀಯಾ ಅಂತ....ನಿನ್ ಮಾತು ಯಾರೂ ನಂಬಾಕಿಲ್ಲ ಈವಾಗ....ಅಂತ ಲೇವಡಿ ಮಾಡಿಬುಟ್ಟ... ತನ್ನ ಅಳಲನ್ನ ಸ್ನೇಹಿತನ ಹತ್ರ ತೋಡಿಕೊಂಡ ವಿಸ್ವಾಮಿತ್ರ.

ಹೌದು..ಇದು ಸುಮಾರು ಆರು ತಿಂಗಳಿಗೆ ಮುಂಚೆ ಬಹಳ ಪ್ರಸಿದ್ಧವಾಗಿದ್ದ ಶ್ರೀ ಶ್ರೀ ವಿಶ್ವಾಮಿತ್ರ ಗುರೂಜಿ ಕಥೆಯ ತುಣುಕಿದು...ಎಂಥೆಂಥ ಕಚಡಾ ಕೆಲಸ ಮಾಡೋ ಅಧಿಕಾರಿಗಳು ರಾಜಾರೋಷವಾಗಿ ಓಡಾಡ್ತಾರೆ...ಸಿಕ್ಕಿಬಿದ್ರೆ ಸಸ್ಪೆಂಡ್ ಆಗ್ತಾರೆ...ಆಮೇಲೆ ಹೇಗೋ ಸಸ್ಪೆನ್ಶನ್ ರಿವೋಕ್ ಮಾಡಿಸ್ಕೊಂಡು ಅಲ್ಲೇ ಬಮ್ದು ಮತ್ತೆ ಮೆರೀತಾರೆ...ಜನರ ಓಟನ್ನ ತಿನ್ನೋದೂ ಅಲ್ದೇ ಅಧಿಕಾರದ ಕುರ್ಚಿ ಹಿಡಿಯೋ ರಾಜಕಾರಣಿ ಮಾಡಬಾರದ್ದನ್ನೆಲ್ಲ ಮಾಡ್ತಾನೆ...ಕೊಲೆ ಸುಲಿಗೆ..ಹೆಣ್ಣು ಮಕ್ಕಳ ಅಸಹಾಯಕತೆನಾ ಕ್ಯಾಶ್ ಮಾಡ್ತಾನೆ...ಆದ್ರೂ...ಮೆರೀತಾನೆ...ಮತ್ತೆ ದುಡ್ಡು ಸುರೀತಾನೆ ಅದೇ ಮಂದಿ ಓಟ್ ತಗೋತಾನೆ ಮತ್ತೆ ಅದೇ ಗದ್ದುಗೆ ಹಿಡೀತಾನೆ...ಇವರೆಲ್ಲರ ತಪ್ಪುಗಳಿಗೆ...ಹೋಲಿಸಿದರೆ ನಮ್ಮ ವಿಸ್ವಾಮಿತ್ರಂದು ಬಹಳ ಜುಜುಬಿ ...ಆದ್ರೂ ....

ನಿಜ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು....... ಆದ್ರೆ ವಿಶ್ವಾಮಿತ್ರ ತಪ್ಪು ಮಾಡಿಲ್ಲ ಅನ್ನೋದಲ್ಲಾ ನನ್ನ ವಾದ...ಇಂತಹ ತಪ್ಪಿಗೆ ಈ ತರಹದ ಶಿಕ್ಷೆಯಾದರೆ....ಅಮಾಯಕ ಜನರ ಪ್ರಾಣ ಹೀರಿ ಮತೀಯ ಗಲಭೆ ಮಾಡಿಸೋ ರಾಜಕಾರಣಿಗೆ ಯಾಕಿಲ್ಲ ಶಿಕ್ಷೆ... ತಿಂದು ತಿಂದು ಹಂದಿಯಾಗಿ ಮೆರೆಯೋ .. ಲೋಕಾಯುಕ್ತರು ಹಿಡಿದ್ರೂ...ಶಿಕ್ಷೆಯಿಲ್ಲ ಅಂತ ತಿಳ್ಕೊಂಡು ಲಂಗು ಲಗಾಮಿಲ್ಲದೇ ಮೆರೆಯೋ ಅಧಿಕಾರಿಗಳಿಗೆ ಯಾಕಿಲ್ಲ ಶಿಕ್ಷೆ...?? ಯೋಚಿಸಬೇಕಾದ್ದೇ ಅಲ್ವೇ..?